×
Ad

ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಉಸಿರುಗಟ್ಟಿ ಸಾವು: ತಾತ್ಕಾಲಿಕ ಮರಣೋತ್ತರ ವರದಿ

Update: 2019-08-02 21:44 IST

ಮಂಗಳೂರು, ಆ.2: ನೇತ್ರಾವತಿ ಸೇತುವೆ ಸಮೀಪದಿಂದ ಕಣ್ಮರೆಯಾಗಿ ಶವವಾಗಿ ಪತ್ತೆಯಾಗಿದ್ದ ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಸಿದ್ಧಾರ್ಥ ಅವರು ನದಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿರುವುದಾಗಿ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ (ಪ್ರೊವಿಷನಲ್ ರಿಪೋರ್ಟ್) ಯಲ್ಲಿ ಕಂಡುಬಂದಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕರು ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿಯನ್ನು ಪ್ರಕರಣದ ತನಿಖಾಧಿಕಾರಿಗೆ ಶುಕ್ರವಾರ ಸಲ್ಲಿಸಿದ್ದಾರೆ.

ವರದಿಯಲ್ಲಿ ಸಿದ್ಧಾರ್ಥ ಸಾವಿಗೆ ಬೇರೆ ಕಾರಣವನ್ನು ನಮೂದಿಸಿಲ್ಲ. ಕೇವಲ ನೀರಿಗೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿರುವುದಾಗಿ ಉಲ್ಲೇಖಿಸಲಾಗಿದೆ. ಇನ್ನುಳಿದ ಎಲ್ಲ ಮಾಹಿತಿಯು ಅಂತಿಮ ವರದಿಯಲ್ಲಿ ಸಲ್ಲಿಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ.

ಸಕಲೇಶಪುರಕ್ಕೆ ತೆರಳುವುದಾಗಿ ಬೆಂಗಳೂರಿನಿಂದ ಕಾರಿನಲ್ಲಿ ಬಂದಿದ್ದ ಉದ್ಯಮಿ ಸಿದ್ಧಾರ್ಥ ಜು.29ರಂದು ಸಂಜೆ 7 ಗಂಟೆಯಿಂದ ಉಳ್ಳಾಲ ನೇತ್ರಾವತಿ ಸೇತುವೆ ಬಳಿ ನಾಪತ್ತೆಯಾಗಿದ್ದರು. ಮರುದಿನ (ಬುಧವಾರ) ಬೆಳಗ್ಗೆ ಅವರ ಶವ ಹೊಯ್ಗೆ ಬಝಾರ್ ಸಮೀಪ ಪತ್ತೆಯಾಗಿತ್ತು. ಈ ಬಗ್ಗೆ ಮಂಗಳೂರು ದಕ್ಷಿಣ (ಪಾಂಡೇಶ್ವರ) ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿತ್ತು.

ಸಿದ್ಧಾರ್ಥ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ವೆನ್ಲಾಕ್ ಜಿಲ್ಲಾಸ್ಪತ್ರೆಯ ಶವಾಗಾರದಲ್ಲಿ ನಡೆಸಲಾಗಿತ್ತು. ಕೆಎಂಸಿ ಆಸ್ಪತ್ರೆಯ ಫೊರೇನ್ಸಿಕ್ ತಜ್ಞ ಡಾ. ಪ್ರತೀಕ್ ರಸ್ತೋಗಿ ಹಾಗೂ ವೆನ್ಲಾಕ್ ಆಸ್ಪತ್ರೆಯ ಫೊರೇನ್ಸಿಕ್ ವಿಭಾಗದ ಡಾ. ಕೆ.ಎಸ್.ರಶ್ಮಿ ನೆರವೇರಿಸಿದ್ದರು. ಇದೀಗ ಶುಕ್ರವಾರ ಮರಣೋತ್ತರ ಪರೀಕ್ಷೆಯ ತಾತ್ಕಾಲಿಕ ವರದಿ ಬಂದಿದೆ.

ದಾವಣಗೆರೆ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಅಂತಿಮ ಹಂತದ ವರದಿ ಸಿದ್ಧಗೊಳ್ಳಲಿದೆ. ಆ ಬಳಿಕವೇ ಸಿದ್ಧಾರ್ಥ ಸಾವು ಕುರಿತಂತೆ ಅಂತಿಮ ವರದಿಯಲ್ಲಿ ತಿಳಿಸಲಾಗುವುದು ಎಂದು ಮೂಲಗಳು ಹೇಳಿವೆ.

10 ದಿನದೊಳಗೆ ಅಂತಿಮ ವರದಿ

ಉದ್ಯಮಿ ಸಿದ್ಧಾರ್ಥ ಆತ್ಮಹತ್ಯೆಯೋ ಅಥವಾ ಕೊಲೆಯೋ ಎಂಬ ಬಗ್ಗೆ ವದಂತಿಗಳು ಕಾಣಿಸಿಕೊಂಡಿತ್ತು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಹೆಚ್ಚಿನ ಪರೀಕ್ಷೆಗೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸುವ ಬಗ್ಗೆ ಆಸ್ಪತ್ರೆ ವೈದ್ಯರನ್ನು ಕೋರಿದ್ದರು. ಅದರಂತೆ ಫೊರೋನ್ಸಿಕ್ ತಜ್ಞರು ಸಿದ್ಧಾರ್ಥ ದೇಹದ ವಿವಿಧ ಭಾಗಗಳನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ. ಅಲ್ಲಿಂದ ಸುಮಾರು 10 ದಿನದೊಳಗೆ ವರದಿ ಬರುವ ಸಾಧ್ಯತೆ ಇದೆ ಎಂದು ಖಚಿತ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News