ಉಡುಪಿ: ಕಾರು ವಂಚನೆ ಪ್ರಕರಣ; ಇಬ್ಬರು ಆರೋಪಿಗಳ ಬಂಧನ
ಉಡುಪಿ, ಆ.2: ಲೀಸ್ ಹಾಗೂ ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇಟ್ಟ ಕಾರುಗಳನ್ನು ಪಡೆದು ವಂಚಿಸುತ್ತಿದ್ದ ಆರೋಪಿಗಳಿಬ್ಬರನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದು, ಇವರಿಂದ 39ಲಕ್ಷ ರೂ. ಮೌಲ್ಯದ ಒಟ್ಟು ಐದು ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮಂಗಳೂರು ಪಡ್ಪು ಬಜಾಲ್ ಕಲ್ಲಕಟ್ಟೆ ನಿವಾಸಿ ಅಬ್ದುಲ್ಲ ಅಬ್ಬಾಸ್ (33), ಬಂಟ್ವಾಳ ತಾಲೂಕಿನ ವಿಟ್ಲ ಮೈರಾ ಕೇಪು ಗ್ರಾಮದ ಮುಹಮ್ಮದ್ ಸಫಾನ್ (22) ಬಂಧಿತ ಆರೋಪಿಗಳು. ಇನ್ನೋರ್ವ ಆರೋಪಿ ಮಂಗಳೂರಿನ ಇಬ್ರಾಹಿಂ ಎಂಬಾತ ತಲೆಮರೆಸಿಕೊಂಡಿದ್ದಾನೆ. ಅಬ್ದುಲ್ಲ ಅಬ್ಬಾಸ್ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಕೊಲೆ ಹಾಗೂ ಬಜ್ಪೆ ಠಾಣೆಯಲ್ಲಿ ಕೊಲೆಗೆ ಯತ್ನ ಪ್ರಕರಣಗಳ ಆರೋಪಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಧಿತರು ಬಳ್ಳಾರಿಯಲ್ಲಿ ಶಿವ ಕುಮಾರ ಎಂಬವರಿಗೆ ಮಾರಾಟ ಮಾಡಿದ ವಾಹನಗಳಾದ 5ಲಕ್ಷ ರೂ. ಮೌಲ್ಯದ ಸ್ಕಾರ್ಪಿಯೋ ಕಾರು, 15 ಲಕ್ಷ ರೂ. ಮೌಲ್ಯದ ಮಹೀಂದ್ರ ಎಕ್ಸ್‌ಯುವಿ 500 ಕಾರು, 4 ಲಕ್ಷ ರೂ. ಮೌಲ್ಯದ ಐ20 ಸ್ಪೋರ್ಟ್ಸ್ ಕಾರು, 7ಲಕ್ಷ ರೂ. ಮೌಲ್ಯದ ಮಹೀಂದ್ರ ಟಿಯುವಿ 300 ಕಾರು, 8ಲಕ್ಷ ರೂ. ಮೌಲ್ಯದ ಬ್ರೀಜಾ ಕಾರುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಇವರು ಲೀಸ್‌ಗೆ ಕೊಟ್ಟ ಕಾರುಗಳನ್ನು ಮತ್ತು ಓಎಲ್‌ಎಕ್ಸ್‌ನಲ್ಲಿ ಮಾರಾಟಕ್ಕೆ ಇದೆ ಎಂದು ಪ್ರಕಟವಾಗುವ ಕಾರುಗಳನ್ನು ಮುಂಗಡ ಹಣ ನೀಡಿ ಪಡೆದು, ಮಾಲಕರನ್ನು ನಂಬಿಸಲು ಕರಾರು ಪತ್ರ ಮಾಡಿ, ನಂತರ ಕಾರುಗಳನ್ನು ದೂರದ ಊರಿಗೆ ತೆಗೆದುಕೊಂಡು ಹೋಗಿ ನಂಬಿಸಿ ಮಾರಾಟ ಮಾಡಿ ಮೋಸ ಮಾಡುತ್ತಿರುವುದಾಗಿ ಹೊಸೂರು ಗ್ರಾಮದ ಕರ್ಜೆ ಕುರ್ಪಾಡಿಯ ಸುನೀಲ್ ಎಂಬಾತ ನೀಡಿದ ದೂರಿನಂತೆ ಜು.24ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಎಸ್ಪಿ ನಿಶಾ ಜೇಮ್ಸ್ ಹಾಗೂ ಹೆಚ್ಚುವರಿ ಎಸ್ಪಿ ಕುಮಾರಚಂದ್ರ ನಿರ್ದೇಶನ, ಡಿವೈಎಸ್ಪಿ ಜೈಶಂಕರ್ ಮತ್ತು ಬ್ರಹ್ಮಾವರ ವೃತ್ತ ನಿರೀಕ್ಷಕ ಶ್ರೀಕಾಂತ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾಧಿಕಾರಿ ರಾಘವೇಂದ್ರ ಸಿ. ನೇತೃತ್ವದಲ್ಲಿ ಎಎಸ್ಸೈ ಸಾಂತಪ್ಪ, ಸಿಬ್ಬಂದಿಗಳಾದ ವೆಂಕಟರಮಣ ದೇವಾಡಿಗ, ರಾಘವೇಂದ್ರ ಕಾರ್ಕಡ, ಪ್ರವೀಣ ಶೆಟ್ಟಿಗಾರ, ದಿಲೀಪ ಕುಮಾರ, ಪ್ರದೀಪ ನಾಯಕ್, ಶಿವಾನಂದ ಈ ವಿಶೇಷ ಕಾರ್ಯಾಚರಣೆ ನಡೆಸಿದ್ದರು.