ಚಂದ್ರಶೇಖರ ಪಾಲೆತ್ತಾಡಿಗೆ ವಡ್ಡರ್ಸೆ ಪತ್ರಿಕೋದ್ಯಮ ಪ್ರಶಸ್ತಿ
ಉಡುಪಿ, ಆ.2: ಬ್ರಹ್ಮಾವರ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಪ್ರತಿವರ್ಷ ನೀಡುವ ವಡ್ಡರ್ಸೆ ರಘುರಾಮ ಶೆಟ್ಟಿ ಪತ್ರಿಕೋದ್ಯಮ ಪ್ರಶಸ್ತಿಗೆ ಈ ಬಾರಿ ಮುಂಬಯಿಯ ಖ್ಯಾತ ಪತ್ರಕರ್ತ, ‘ಕರ್ನಾಟಕ ಮಲ್ಲ’ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ ಆಯ್ಕೆಯಾಗಿದ್ದಾರೆ ಎಂದು ಸಂಘದ ಅಧ್ಯಕ್ಷ ಚಿತ್ತೂರು ಪ್ರಭಾಕರ ಆಚಾರ್ಯ ತಿಳಿಸಿದ್ದಾರೆ.
ಶುಕ್ರವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಆ.4ರ ರವಿವಾರ ಬ್ರಹ್ಮಾವರದ ಬಂಟರ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಅವರು ವಿವರಿಸಿದರು.
ಅಪರಾಹ್ನ 2:30ಕ್ಕೆ ‘ಪ್ರಸಕ್ತ ಕಾಲಘಟ್ಟದಲ್ಲಿ ಪತ್ರಿಕೋದ್ಯಮ’ ಎಂಬ ವಿಷಯದ ಕುರಿತು ಮಾಧ್ಯಮ ಸಂವಾದ ನಡೆಯಲಿದ್ದು, ಇದರ ಅಧ್ಯಕ್ಷತೆ ಯನ್ನು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ವಹಿಸಲಿದ್ದಾರೆ. ಬೆಂಗಳೂರಿನ ಅಜಿತ್ ಹನುಮಕ್ಕನವರ್ ಹಾಗೂ ಹಿರಿಯ ರಾಜಕಾರಣಿ ಬಿ.ಎಲ್.ಶಂಕರ್ ಅವರು ಸಂವಾದ ನಡೆಸಲಿದ್ದಾರೆ ಎಂದರು.
ಸಂಜೆ 4:30ಕ್ಕೆ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದ್ದು, ಸಾಮಾಜಿಕ ಹೋರಾಟಗಾರರಾದ ಡಾ.ರವೀಂದ್ರನಾಥ ಶ್ಯಾನುಭಾಗ್ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ಶಾಸಕರಾದ ಕೆ.ರಘುಪತಿ ಭಟ್, ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ, ಖ್ಯಾತ ಕಾರ್ಟೂನಿಸ್ಟ್ ಪಂಜು ಗಂಗೊಳ್ಳಿ, ಕೋಟದ ಆನಂದ ಸಿ.ಕುಂದರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ್ ಪಾಂಡೇಲು ಮುಂತಾದವರು ಉಪಸ್ಥಿತರಿರುವರು.
ಕೊನೆಯಲ್ಲಿ ಖ್ಯಾತ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ನಾಟ್ಯ ವೈಭವ ಪ್ರದರ್ಶನಗೊಳ್ಳಲಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿ ಕಾರಿಗಳಾದ ಮೋಹನ್ ಉಡುಪ, ಪ್ರವೀಣ್ ಮುದ್ದೂರು, ಹರೀಶ್ ಕಿರಣ ತುಂಗ ಉಪಸ್ಥಿತ ರಿದ್ದರು.