ಪಂಪ್‌ವೆಲ್: ದುರ್ವಾಸನೆ ಆವಾಸ ಕೇಂದ್ರವಾಗಿ ಪರಿವರ್ತನೆ
ಮಂಗಳೂರು, ಆ. 2: ನಗರದಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಬೃಹತ್ ವಾಹನಗಳು ನಗರದ ಕೆಲವೆಡೆ ತ್ಯಾಜ್ಯನೀರು ಚೆಲ್ಲಲು ಕಾರಣವಾಗುತ್ತಿವೆ. ಮಂಗಳೂರಿನ ಪಂಪ್‌ವೆಲ್ ಸರ್ಕಲ್‌ನ ರಸ್ತೆಯಂಚಿನ ಜಾಗವೇ ಇದಕ್ಕೊಂದು ನಿದರ್ಶನವಾಗಿದೆ.
ಕಳೆದ ಒಂದು-ಒಂದೂವರೆ ತಿಂಗಳಿನಿಂದ ಪಂಪ್‌ವೆಲ್ ಸರ್ಕಲ್‌ನಿಂದ ಕಂಕನಾಡಿ ಬೈಪಾಸ್ ರಸ್ತೆಗೆ ತೆರಳುವ ಮಾರ್ಗಮಧ್ಯದ ಬಲಬದಿಯ ಅಪಾರ್ಟ್‌ಮೆಂಟ್‌ವೊಂದರ ಸಮೀಪದಲ್ಲೇ ತ್ಯಾಜ್ಯ ವಿಲೇವಾರಿ ವಾಹನಗಳನ್ನು ನಿಲ್ಲಿಸಲಾಗುತ್ತಿದೆ. ತ್ಯಾಜ್ಯದ ದುರ್ವಾಸನೆಯು ಸ್ಥಳೀಯರಿಗೆ ನಿತ್ಯ ನರಕದಂತೆ ಭಾಸವಾಗುತ್ತಿದೆ.
ತ್ಯಾಜ್ಯ ವಿಲೇವಾರಿ ವಾಹನಗಳು ಸಣ್ಣ ವಾಹನಗಳಿಂದ ದೊಡ್ಡ ವಾಹನಕ್ಕೆ ಕಸ ಬದಲಾಯಿಸುತ್ತವೆ. ಈ ಸಂದರ್ಭ ಸ್ಥಳದಲ್ಲಿ ತ್ಯಾಜ್ಯ ವರ್ಗಾಯಿಸುವಾಗ ತ್ಯಾಜ್ಯ ರಸ್ತೆಗೆ ಚೆಲ್ಲುತ್ತದೆ. ವಾಹನದಿಂದ ಹಸಿ ತ್ಯಾಜ್ಯದಿಂದ ಹೊರಬರುವ ಕೊಳಚೆ ನೀರು ರಸ್ತೆಯಿಡೀ ಹರಿಯುತ್ತದೆ.
ಈ ವೇಳೆ ಕಸ-ಕಡ್ಡಿಗಳು ಬಿದ್ದರೂ ಕ್ಯಾರೇ ಎನ್ನುವುದಿಲ್ಲ. ವಾಹನಗಳು ಹೊರಟು ಹೋದರೂ ಸ್ಥಳದಲ್ಲಿ ಸಹಿಸಲಸಾಧ್ಯವಾದಂತಹ ವಾಸನೆಯುಕ್ತ ವಾತಾವರಣ ಹಾಗೆಯೇ ಉಳಿಯುತ್ತದೆ. ಇದು ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು, ಸ್ಥಳೀಯ ಮನೆ, ಅಂಗಡಿ, ಕಚೇರಿಯವರಿಗೆ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ.
ನಗರದಲ್ಲಿ ಕಳೆದ ಕೆಲವು ವರ್ಷಗಳಿಂದ ಆ್ಯಂಟನಿ ವೇಸ್ಟ್ ಹ್ಯಾಂಡ್ಲಿಂಗ್ ಸಂಸ್ಥೆ ತ್ಯಾಜ್ಯ ವಿಲೇವಾರಿ ಗುತ್ತಿಗೆ ವಹಿಸಿಕೊಂಡಿದೆ. ಹಿಂದೆ ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದ ಗುಜಿರಿ ಲಾರಿ, ಟಿಪ್ಪರ್‌ಗಳಿಗೆ ಬದಲಾಗಿ ಆಧುನಿಕ ಮಾದರಿಯ ಟ್ರಕ್‌ಗಳು ತ್ಯಾಜ್ಯ ಸಂಗ್ರಹಿಸಿ ಪಚ್ಚನಾಡಿಯಲ್ಲಿರುವ ತ್ಯಾಜ್ಯ ವಿಲೇವಾರಿ ಕೇಂದ್ರಕ್ಕೆ ತೆಗೆದುಹೋಗಿ ವಿಲೇವಾರಿ ಮಾಡುತ್ತಿದೆ. ಆದರೆ ಈ ಆಧುನಿಕ ವಾಹನಗಳೇ ನಗರದ ಕೆಲವೆಡೆ ತ್ಯಾಜ್ಯ ಚೆಲ್ಲಲು ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರುತ್ತಿದ್ದಾರೆ.
ನಗರದಲ್ಲಿ ಮನೆ-ವಸತಿ ಸಮುಚ್ಚಯ, ಹೋಟೆಲ್‌ಗಳಿಂದ ತ್ಯಾಜ್ಯ ಸಂಗ್ರಹಿಸಲು ಸಣ್ಣ ಟಿಪ್ಪರ್ ಮಾದರಿಯ ವಾಹನವಿದ್ದು, ಒಳ ರಸ್ತೆಗಳು, ಓಣಿಗಳಿಗೆಲ್ಲ ತೆರಳಿ ಈ ವಾಹನ ಕಸವನ್ನು ಸಂಗ್ರಹಿಸುತ್ತವೆ. ಹೀಗೆ ಸಂಗ್ರಹವಾಗುವ ಕಸವನ್ನು ನಗರದ ಕೆಲವೊಂದು ನಿಗದಿತ ಸ್ಥಳಗಳಲ್ಲಿ ದೊಡ್ಡ ವಾಹನಕ್ಕೆ ವರ್ಗಾಯಿಸಲಾಗುತ್ತದೆ. ಪಂಪ್‌ವೆಲ್ ಸದ್ಯ ತ್ಯಾಜ್ಯ ಬದಲಾಯಿಸುವ ಕೇಂದ್ರವಾಗಿದೆ ಎಂದು ಸ್ಥಳೀಯರು ಅಳಲುತೋಡಿಕೊಂಡರು.
ತ್ಯಾಜ್ಯ ಸಂಗ್ರಹಿಸುವ ವಾಹನಗಳನ್ನು ಈ ಹಿಂದೆ ಕಂಕನಾಡಿ ಬಸ್ ನಿಲ್ದಾಣದ ಹಿಂಭಾಗದಲ್ಲಿ ನಿಲ್ಲಿಸಲಾಗುತ್ತಿತ್ತು. ಸದ್ಯ ಆ ಜಾಗದಲ್ಲಿ ಮಳಿಗೆಗಳ ಬೃಹತ್ ಮಾರುಕಟ್ಟೆಯೇ ತಲೆಎತ್ತುತ್ತಿದೆ. ಹೀಗಾಗಿ ತ್ಯಾಜ್ಯ ಸಂಗ್ರಹ ವಾಹನಗಳ ಸ್ಥಳವನ್ನೂ ಸ್ಥಳಾಂತರಿಸಿ ಪಂಪ್‌ವೆಲ್‌ಗೆ ಶಿಫ್ಟ್ ಮಾಡಿರುವುದು ಸಮಸ್ಯೆಗೆ ಮೂಲ ಕಾರಣವಾಗಿದೆ ಎನ್ನುವುದು ಸ್ಥಳೀಯರ ಅಳಲು.
''ಪಂಪ್‌ವೆಲ್ ಸಮೀಪದಲ್ಲಿ ತ್ಯಾಜ್ಯ ವಿಲೇವಾರಿ ವಾಹನಗಳಿಂದ ತೊಂದರೆಯಾಗುತ್ತಿದೆ ಎನ್ನುವುದರ ಬಗ್ಗೆ ಯಾವುದೇ ದೂರುಗಳು ಬಂದಿಲ್ಲ. ಈ ಬಗ್ಗೆ ಸ್ಥಳೀಯರು ದೂರು ನೀಡಿದಲ್ಲಿ ಕ್ರಮ ಕೈಗೊಳ್ಳಲಾಗುವುದು''
- ಮುಹಮ್ಮದ್ ನಝೀರ್,
ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು
ಸುರಕ್ಷತಾ ಸಲಕರಣೆ ರಹಿತ ಕಾರ್ಮಿಕರು
ನಗರದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಪೌರಕಾರ್ಮಿಕರಲ್ಲಿ ಹೆಚ್ಚಿನವರಿಗೆ ಯಾವುದೇ ಸುರಕ್ಷತಾ ಸಲಕರಣೆಗಳಿಲ್ಲ. ಕಾಲಿಗೆ ಬೂಟ್, ಕೈಗೆ ಗ್ಲೌಸ್, ಮುಖಕ್ಕೆ ಮಾಸ್ಕ್ ಹಾಕಿ ಕೆಲಸ ಮಾಡುವ ಕಾರ್ಮಿಕರು ನೋಡಲು ಸಿಗುವುದೇ ಇಲ್ಲ. ಕೆಲವೊಬ್ಬ ಕಾರ್ಮಿಕರು ಇದ್ದರೂ ಕೆಲಸ ಮಾಡುವಾಗ ಹಾಕುವುದಿಲ್ಲ. ಪರಿಣಾಮ ಕಾರ್ಮಿಕರಲ್ಲಿ ರೋಗಭೀತಿಯೂ ಕಾಡುತ್ತಿದೆ.