ಪಡುಬಿದ್ರಿ ಪರಿಸರದಲ್ಲಿ ಕಡಲ್ಕೊರೆತ

Update: 2019-08-02 16:53 GMT

ಪಡುಬಿದ್ರಿ: ಪಡುಬಿದ್ರಿ ಪರಿಸರದ ಎರ್ಮಾಳು ಮತ್ತು ಉಚ್ಚಿಲ ಬಡಾದಲ್ಲಿ ಶುಕ್ರವಾರ ಕಡಲ್ಕೊರೆತ ಕಾಣಿಸಿಕೊಂಡಿದೆ. ಹಲವೆಡೆ ಮರಗಳು ಸಮುದ್ರ ಪಾಲಾಗಿದೆ.

ಪಡುಬಿದ್ರಿಯ ನಡಿಪಟ್ಣದಲ್ಲಿ ಕಡಲ ಕಿನಾರೆಯಲ್ಲಿ ಪ್ರವಾಸೋಧ್ಯಮ ಇಲಾಖೆಯಿಂದ ನಿರ್ಮಿಸಿರುವ ಕಾಂಕ್ರೀಟ್ ರಚನೆ ಭಾಗಶಃ ಹಾನಿಗೊಂಡಿದೆ. ಸಮೀಪದಲ್ಲೇ ವೇದಿಕೆ ಇದೆ. ಕಡಲ್ಕೊರೆತ ತಿವ್ರಗೊಂಡಲ್ಲಿ ವೇದಿಕೆಗೂ ಹಾನಿಯಾಗುವ ಸಾಧ್ಯತೆ ಇದೆ. 

ಪಡುಬಿದ್ರಿಯ ಕಾಡಿಪಟ್ಣ ಲಕ್ಷ್ಮಣ ಸಾಲ್ಯಾನ್ ಮನೆ ಬಳಿ ಗಾಳಿ ಮರಗಳು ಸಮುದ್ರ ಪಾಲಾಗುವ ಭೀತಿಯಲ್ಲಿದೆ. ಸಮೀಪದಲ್ಲೇ ಮೀನುಗಾರಿಕಾ ದೋಣಿಯ ಶೆಡ್ ಹಾಗೂ ಸಮುದ್ರದಿಂದ 10 ಮೀಟರ್ ಅಂತರದಲ್ಲಿರುವ ಮೀನುಗಾರಿಕಾ ರಸ್ತೆ ಅಪಾಯದಲ್ಲಿದೆ.  ಇಲ್ಲಿನ ನಡಿಪಟ್ಣ ಇಲ್ಲಿನ ಶ್ರೀ ವಿಷ್ಣು ಭಜನಾ ಮಂದಿರದ ಬಳಿಯೂ ಕೊರೆತ ತೀವ್ರವಾಗಿದೆ. ನಡಿಪಟ್ಣದಲ್ಲಿ ಕಡಲ ಕಿನಾರೆಯಲ್ಲಿ ಬೀಚ್ ನಿರ್ವಹಣಾ ಸಮಿತಿ ನಿರ್ಮಿಸಿರುವ ಕಾಂಕ್ರೀಟ್ ರಚನೆ ಭಾಗಶಃ ಹಾನಿಗೊಂಡಿದೆ. 

ಬಡಾ ಎರ್ಮಾಳಿನ ಮೀರಾ ಕರ್ಕೇರ ಅವರ ಮನೆ ಸಮೀಪ ಈಗಾಗಲೇ ಹಲವಾರು ತೆಂಗಿನ ಮರಗಳು ಸಮುದ್ರ ಪಾಲಾಗಿದೆ.  ಇಂದು ಮತ್ತೆರಡು ತೆಂಗಿನ ಮರಗಳು ಕೊರೆತಕ್ಕೆ ಸಿಲುಕಿದೆ. ಇಲ್ಲಿ ಕೊರೆತ ಕೇವಲ 5 ಮೀಟರ್‍ನಷ್ಟು ವಿಸ್ತಾರಗೊಂಡಲ್ಲಿ ಈ ಭಾಗದಲ್ಲಿ ಹಾದು ಹೋಗುವ ಮೀನುಗಾರಿಕಾ ರಸ್ತೆ ಸಂಪರ್ಕ ಕಡಿತಗೊಳ್ಳಲಿದೆ. ಇಲ್ಲಿನ ಜನ ಕಲ್ಲು ಹಾಕುವ ತುರ್ತು ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ. ಕೊರೆತ ತಡೆಯಲು ಈವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. 

ಬಡಾ ಎರ್ಮಾಳು ಕಡಲ್ಕೊರೆತ ಪ್ರದೇಶಕ್ಕೆ ಕಾಪು ತಹಶೀಲ್ದಾರ್ ಇಸಾಕ್ ಮಹಮ್ಮದ್ ಭೇಟಿ ನೀಡಿ ಪರಿಶೀಲಿಸಿ ಸ್ಥಳೀಯರಿಂದ ಮಾಹಿತಿ ಸಂಗ್ರಹಿಸಿದರು. ಮೇಲಾಧಿಕಾರಿಗಳಿಗೆ ವರದಿ ನೀಡಿ ತುರ್ತು ಕ್ರಮ ಕೈಗೊಳ್ಳುವ ಬಗ್ಗೆ ಕೋರಿಕೊಂಡರು. ಕಂದಾಯ ಪರಿವೀಕ್ಷಕ ರವಿಶಂಕರ್, ಗ್ರಾಮಕರಣಿಕ ಜಗದೀಶ್,  ಬಡಾ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶರ್ಮಿಳಾ ಡಿ ಸಾಲ್ಯಾನ್, ಪಿಡಿಒ ಕುಶಾಲಿನಿ ಮತ್ತಿತರರು ಭೇಟಿ ನೀಡಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News