ಆನಂದ ಆಶ್ರಮ ಕಾಲೇಜ್: ಪಾಲಕ-ಶಿಕ್ಷಕರ ಸಮಿತಿ ಸಭೆ
ಭಟ್ಕಳ: ಆನಂದ ಆಶ್ರಮ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಪಾಲಕ-ಶಿಕ್ಷಕರ ಸಮಿತಿಯ ಸಭೆ ನಡೆಯಿತು.
ಸಭೆಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಉಪಸ್ಥಿತರಿದ್ದ ಮಾತನಾಡಿದ ಮಂಗಳೂರಿನ ಧರ್ಮಗುರು ಅಂತೋನಿ ಸೆರಾ ಮಾತನಾಡಿ ಮಗುವಿನ ಸರ್ವತೋಮುಖ ಬೆಳವಣಿಗೆಯಲ್ಲಿ ಪಾಲಕರ ಮತ್ತು ಶಿಕ್ಷಕರ ಪಾತ್ರವೇನು ಎಂಬುದನ್ನು ಪಾಲಕರಿಗೆ ತಿಳಿಸಿಕೊಟ್ಟರು.
ಮಕ್ಕಳು ಶಾಲೆಯಲ್ಲಿರುವಷ್ಟೇ ಹೊತ್ತು ಪಾಲಕರೊಂದಿಗೆ ಇರುತ್ತಾರೆ. ಶಾಲೆಯಲ್ಲಿ ಎನು ಕಲಿಯುತ್ತಾರೆ ಅದನ್ನು ಮನೆಯಲ್ಲಿ ಪಾಲಕರು ಪರಶೀಲಿಸಬೇಕು ಹಾಗೂ ಪಾಲಕರು ಮಕ್ಕಳೊಂದಿಗೆ ಓದಿಗೆ ಸಹಕರಿಸಬೇಕು ಎಂದರು.
ಎಸ್.ಎಸ್.ಎಲ್.ಸಿ.ಯಲ್ಲಿ ಕ್ಲಾಸಿಗೆ ಪ್ರಥಮ ಹಾಗೂ ಶೇ.90ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ಮತ್ತು ಪಿ.ಯು.ಸಿ.ಯಲ್ಲಿ ಹಾಗೂ ಎಂಟು ಮತ್ತು ಒಂಬತ್ತನೇ ತರಗತಿಯಲ್ಲಿ ಪ್ರಥಮ ಬಂದ ವಿದ್ಯಾರ್ಥಿಗಳನ್ನು ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸಿಸ್ಟರ್ ಲೀನಾ ಅವರು ಮಾತನಾಡಿ ಆನಂದ ಆಶ್ರಮ ಸಂಸ್ಥೆಯನ್ನು ನಡೆಸುತ್ತಿರುವ ಅಸುರ್‍ಲೈನ್ ಫ್ರಾನ್ಸಿಸ್ಕಾನ್ ಸಂಸ್ಥೆಯು 150ಕ್ಕೂ ಹೆಚ್ಚು ಶಾಲೆಗಳನ್ನು ನಡೆಸುತ್ತಿದ್ದು ವಿದ್ಯಾರ್ಥಿಗಳ ಹಿತ ಕಾಪಾಡುವಲ್ಲಿ ನಾವು ಪ್ರಥಮ ಆದ್ಯತೆಯನ್ನು ನೀಡುತ್ತೇವೆ. ಪಾಲಕರೂ ಕೂಡಾ ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಕಡೆಗೆ ಗಮನ ನೀಡಿ ನಿಮ್ಮ ಮಗು ಉತ್ತಮ ಫಲಿತಾಂಶ ಪಡೆಯಲು ಸಹಕಾರಿಯಾಗುವುದು ಎಂದರು.
ಪಾಲಕ-ಶಿಕ್ಷಕರ ಸಮಿತಿಯ ಉಪಾಧ್ಯಕ್ಷ ರಾಧಾಕೃಷ್ಣ ಭಟ್ಟ ಮಾತನಾಡಿ ನಿಮ್ಮ ಮಗುವಿಗೆ ಮನೆಯಲ್ಲಿ ಉತ್ತಮ ಓದುವ ವಾತಾವರಣವನ್ನು ಕಲ್ಪಿಸುವುದರೊಂದಿಗೆ ಶಾಲೆಯಲ್ಲಿ ಮಗುವಿನ ಕಲಿಕೆಯ ಕುರಿತು ಸದಾ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು. 2018-19ನೇ ಸಾಲಿನ ವರದಿಯನ್ನು ಪಾಲಕರ ಮುಂದೆ ಪ್ರಸ್ತುತ ಪಡಿಸಲಾಯಿತು.
ಪ್ರಾಂಶುಪಾಲರಾದ ಸಿಸ್ಟರ್ ತೆರೆಜಿಯಾ ಸೆರಾ ಶಿಕ್ಷಕರನ್ನು ಸಭೆಗೆ ಪರಿಚಯಿಸಿ ಶಾಲಾ ನಿಯಮಾವಳಿಗಳನ್ನು ಪಾಲಕರ ಮುಂದೆ ಪ್ರಸ್ತುತ ಪಡಿಸಿದರು. ಸಿಸ್ಟರ್ ಆರೋಗ್ಯಮ್ಮ ಸ್ವಾಗತಿಸಿದರು. ಸಿಸ್ಟರ್ ಟೀನಾ ವಂದಿಸಿದರು. ಶಿಕ್ಷಕಿಯರಾದ ಪ್ರಿಯಾ ಮತ್ತು ಸವಿತಾ ಕಾರ್ಯಕ್ರಮ ನಿರೂಪಿಸಿದರು.