ಭಟ್ಕಳ : ಅಂಜುಮನ್ ಕಾಲೇಜಿನಲ್ಲಿ ವನಮಹೋತ್ಸವ
ಭಟ್ಕಳ : ನಗರದ ಅಂಜುಮನ್ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲ ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾ ಘಟಕ, ಎನ್‍ಸಿಸಿ ಘಟಕ ಮತ್ತು ಪದವಿ ಪೂರ್ವ ಕಾಲೇಜಿನ ಸಹಯೋಗದಲ್ಲಿ ಮಹಾವಿದ್ಯಾಲಯದ ಆವರಣದಲ್ಲಿ ಗಿಡಗಳನ್ನು ನೆಡುವುದರ ಮೂಲಕ ವನಮಹೋತ್ಸವವನ್ನು ಆಚರಿಸಲಾಯಿತು.
ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಆಡಳಿತ ಮಂಡಳಿಯ ಅಧ್ಯಕ್ಷ ಜುಕಾಕು ಅಬ್ದುಲ್ ರಹೀಮ್, ಕಾರ್ಯದರ್ಶಿ ಸಿದ್ದಿಖ್ ಇಸ್ಮಾಯಿಲ್, ಕಾಲೇಜು ಬೋರ್ಡ್ ಕಾರ್ಯದರ್ಶಿ ಮೊಹಮ್ಮದ್ ಮೌಸೀನ್ ಅವರು ವನಮೋತ್ಸವ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಗಿಡಗಳನ್ನು ನೆಟ್ಟು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅಂಜುಮನ್ ಹಾಮಿ-ಇ-ಮುಸ್ಲಿಮೀನ್ ಆಡಳಿತ ಮಂಡಳಿಯ ಅಧ್ಯಕ್ಷ ಜುಕಾಕು ಅಬ್ದುಲ್ ರಹೀಮ್ ಗಿಡಗಳನ್ನು ನೆಡುವುದರ ಜೊತೆಗೆ ಗಿಡಗಳ ಆರೈಕೆ ಮಾಡಿ ಮರವಾಗಿ ಬೆಳಸುವುದು ಅತೀ ಮುಖ್ಯವಾಗಿದೆ. ವನಮಹೋತ್ಸವದ ಉದ್ದೇಶವೇ ನಮ್ಮ ಪರಿಸರವನ್ನು ಉಳಿಸುವುದು. ಗಿಡಗಳನ್ನು ಬೆಳೆಸಲು ಎಲ್ಲಾ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಕರೆ ನೀಡಿದರು.
ಮರಗಳನ್ನು ಬೆಳೆಸುವುದರಿಂದ ನಾವು ನಮ್ಮ ಪರಿಸರಕ್ಕೆ ಉತ್ತಮ ಗಾಳಿ, ನೆರಳು ನೀಡುವಂತೆ ನೋಡಿಕೊಳ್ಳುವುದು ನಮ್ಮ ಆದ್ಯ ಕರ್ತವ್ಯ ಎಂದೂ ಅವರು ಹೇಳಿದರು.
ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಮುಸ್ತಾಕ್ ಶೇಖ್ ಮತ್ತು ಪದವಿಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯ ಪ್ರೊ. ಯುಸುಫ್ ಕೋಲಾ ಉಪಸ್ಥಿತರಿದ್ದರು. ರಾಷ್ಟ್ರೀಯ ಸೇವಾ ಯೋಜನಾ ಘಟಕದ ಸಂಯೋಜನಾಧಿಕಾರಿ ಪ್ರೊ. ಆರ್. ಎಸ್. ನಾಯಕ ವಂದಿಸಿದರು.