'ವುಮೆನ್ಸ್ ರಿಸೋರ್ಸ್ ಡೆವಲಪ್ ಮೆಂಟ್ ಕೋರ್ಸ್' ಸಮಾರೋಪ ಕಾರ್ಯಕ್ರಮ
ಮಂಗಳೂರು: ನ್ಯಾಷನಲ್ ವುಮೆನ್ಸ್ ಫ್ರಂಟ್ ಕರ್ನಾಟಕ ಇದರ ವತಿಯಿಂದ ನಡೆಸಲಾದ 16 ದಿನಗಳ ವುಮೆನ್ಸ್ ರಿಸೋರ್ಸ್ ಡೆವಲಪ್ ಮೆಂಟ್ ಕೋರ್ಸ್ ಸಮಾರೋಪ ಕಾರ್ಯಕ್ರಮವು ಮಂಗಳೂರಿನ ಕೋಸ್ಟಲ್ ಕಾನ್ಫರೆನ್ಸ್ ಹಾಲ್ ನಲ್ಲಿ ನಡೆಯಿತು.
ಜು.16ಕ್ಕೆ ಪ್ರಾರಂಭವಾದ ಕೋರ್ಸ್ ಜು. 31 ಕ್ಕೆ ಕೊನೆಗೊಂಡಿತು.
ಕೋರ್ಸಿನ ನಿರ್ದೇಶಕರಾದ ಫಾತಿಮಾ ನಸೀಮಾ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನ್ಯಾಷನಲ್ ವುಮೆನ್ಸ್ ಫ್ರಂಟ್ ಇದರ ರಾಜ್ಯ ಕಾರ್ಯದರ್ಶಿ ನಸೀಮಾ ಬೆಂಗಳೂರು, ಮಹಿಳೆಯರು 4 ಗೋಡೆಗಳ ಮಧ್ಯೆ ತಮ್ಮ ಭವಿಷ್ಯವನ್ನು ಕಳೆಯದೇ ಸಮಾಜಮುಖಿ ಚಿಂತನೆಗಳನ್ನು ಬೆಳೆಸಿಕೊಳ್ಳಲು ಪ್ರಯತ್ನಿಸಬೇಕು, ಆ ನಿಟ್ಟಿನಲ್ಲಿ ಈ ಕೋರ್ಸ್ ಬಹಳ ಮಹತ್ವದ ಮಾಹಿತಿಗಳನ್ನು ತರಗತಿಗಳನ್ನು ನೀಡಿದೆ. ಇದರ ಸದುಪಯೋಗವನ್ನು ಮಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನ್ಯಾಷನಲ್ ವುಮೆನ್ಸ್ ಫ್ರಂಟ್ ರಾಜ್ಯಾಧ್ಯಕ್ಷೆ ಝೀನತ್ ಬಂಟ್ವಾಳ ವಹಿಸಿದ್ದರು. ಡಬ್ಲ್ಯೂಆರ್ ಡಿ ಸಿ ಸಲಹಾ ಸಮಿತಿ ಸದಸ್ಯರಾದ ನೌಶೀರ ಹಾಗೂ ಸೈದ ಯೂಸುಫ್ ಉಪಸ್ಥಿತರಿದ್ದರು.
ತರಬೇತಿಯನ್ನು ಪೂರ್ಣಗೊಳಿಸಿದ 15 ವಿದ್ಯಾರ್ಥಿನಿಯರಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿನಿಯರನ್ನು ಗುರುತಿಸಿ ಪುರಸ್ಕರಿಸಲಾಯಿತು. ಮುಫೀದಾ ಅವರು ಸ್ವಾಗತಿಸಿ ಶಹನಾಜ್ ವಂದಿಸಿದರು. ಹಲೀಮಾ ಸಹ್ಲಾ ಕಾರ್ಯಕ್ರಮವನ್ನು ನಿರೂಪಿಸಿದರು.