ಸೇತುವೆಗಳ ಸುತ್ತ ರಕ್ಷಣಾತ್ಮಕ ತಡೆಗೋಡೆಗೆ ಶಾಸಕ ಯು.ಟಿ. ಖಾದರ್ ಒತ್ತಾಯ

Update: 2019-08-03 13:15 GMT

ಮಂಗಳೂರು, ಆ.3: ಜನಸಾಮಾನ್ಯರ ಸುರಕ್ಷತೆಯ ದೃಷ್ಟಿಯಿಂದ ಉಳ್ಳಾಲದ ನೇತ್ರಾವತಿ ಸೇತುವೆ ಸೇರಿದಂತೆ ರಾಷ್ಟ್ರೀಯ ಹೆದ್ದಾರಿ ಯಲ್ಲಿರುವ ನದಿಗಳ ಸೇತುವೆಗಳ ಸುತ್ತಮುತ್ತ ರಕ್ಷಣಾತ್ಮಕ ಪಾರದರ್ಶಕ ತಡೆಗೋಡೆ ಅಳವಡಿಸುವಂತೆ ಒತ್ತಾಯಿಸಿ ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಸಚಿವರಿಗೆ ಪತ್ರ ಬರೆದಿರುವುದಾಗಿ ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ತಿಳಿಸಿದ್ದಾರೆ.

ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಪ್ರಾಕೃತಿಕ ಸೌಂದರ್ಯದಿಂದ ಕೂಡಿದ ಜಿಲ್ಲೆಯ ಅನೇಕ ಸೇತುವೆಗಳು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಒಳಪಡುತ್ತಿದ್ದು, ಅವುಗಳಿಗೆ ಸಮರ್ಪಕ ರಕ್ಷಣಾ ವ್ಯವಸ್ಥೆಯಿಲ್ಲ. ಹಾಗಾಗಿ ಇಲ್ಲಿ ನದಿ, ಸಮುದ್ರಕ್ಕೆ ಹಾರಿ ಆತ್ಮಹತ್ಯೆಯಂತಹ ಘಟನೆಗಳು ನಡೆಯುತ್ತಿವೆ. ಈ ಸೇತುವೆಗಳ ಸುತ್ತಮುತ್ತ ರಕ್ಷಣಾತ್ಮಕ ನೆಲೆಯಲ್ಲಿ ಫೈಬರ್‌ನ ಪಾರದರ್ಶಕ ಗ್ಲಾಸ್‌ಗಳನ್ನು ಅಳವಡಿಸಲು ಮುಂದಾಗಬೇಕು. ಅಲ್ಲದೆ ಸಿಸಿ ಕ್ಯಾಮರಾಗಳನ್ನು ಅಳವಡಿಸಲು ಸೂಚನೆ ನೀಡಬೇಕು. ಪಾರದರ್ಶಕ ತಡೆಗೋಡೆಯಿಂದ ಹೆದ್ದಾರಿಯಲ್ಲಿ ಸಂಚರಿಸುವವರಿಗೆ ಸೇತುವೆಯ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸಲು ಸಾಧ್ಯವಾಗಲಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ ಎಂದು ಅವರು ಹೇಳಿದರು.

ಅಧಿಕಾರಿಗಳ ವರ್ಗಾವಣೆ ಬೇಡ

ಅಧಿಕಾರ ವಹಿಸಿಕೊಂಡ ಕೂಡಲೇ ಮುಖ್ಯಮಂತ್ರಿಗಳು ಅಧಿಕಾರಿಗಳ ವರ್ಗಾವಣೆಗೆ ಮುಂದಾಗಿದ್ದಾರೆ. ಹಿಂದಿನ ಸರ್ಕಾರ ನಿಯುಕ್ತಿಗೊಳಿಸಿದ ಅಧಿಕಾರಿಗಳನ್ನೂ ಎತ್ತಂಗಡಿ ಮಾಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೇ ದಕ್ಷತೆಯಿಂದ ಕೆಲಸ ಮಾಡುವ ಅಧಿಕಾರಿಗಳ ವರ್ಗಾವಣೆ ಬೇಡ ಎಂದು ಅವರು ಆಗ್ರಹಿಸಿದರು.

ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದಾಗ ಕನಿಷ್ಠ ಒಂದು ವರ್ಷವರೆಗೆ ಯಾವುದೇ ವರ್ಗಾವಣೆ ಮಾಡಿರಲಿಲ್ಲ. ಆದರೆ ಈಗ ಸಚಿವ ಸಂಪುಟ ವಿಸ್ತರಣೆಯಾಗದೆ, ಗೃಹ ಸಚಿವರ ನೇಮಕವಾಗುವ ಮೊದಲೇ ತರಾತುರಿಯಲ್ಲಿ ಉತ್ತಮ ಅಧಿಕಾರಿಗಳನ್ನೂ ಮುಖ್ಯಮಂತ್ರಿಗಳು ವರ್ಗಾಯಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ವರ್ಗಾಯಿಸದಂತೆ ಕೋರಿ ಮುಖ್ಯಂತ್ರಿಗೆ ಪತ್ರ ಬರೆಯಲಾಗಿದೆ ಎಂದು ಯು.ಟಿ.ಖಾದರ್ ಹೇಳಿದರು.

ದ.ಕ.ಜಿಲ್ಲೆಯಲ್ಲಿ ಮಂಗಳೂರು ಪೊಲೀಸ್ ಕಮಿಷನರ್‌ನ್ನು ವರ್ಗಾಯಿಸಲಾಗಿದೆ. ಇನ್ನು ಜಿಲ್ಲಾಧಿಕಾರಿ, ಎಸ್ಪಿ, ಜಿ.ಪಂ. ಸಿಇಒ ಪ್ರಾಮಾಣಿಕ ಅಧಿಕಾರಿಗಳಾಗಿದ್ದಾರೆ. ಸ್ವಹಿತಕ್ಕಾಗಿ ಅಧಿಕಾರಿಗಳನ್ನು ವರ್ಗಾಯಿಸದೆ ಕರ್ತವ್ಯದಲ್ಲಿ ಮುಂದುವರಿಯಲು ಅವಕಾಶ ಮಾಡಬೇಕು ಎಂದು ಅವರು ಹೇಳಿದರು.

ರಾಜ್ಯದಲ್ಲಿ ಅತಿವೃಷ್ಟಿಯನ್ನು ಕೇಳೋರಿಲ್ಲ

ರಾಜ್ಯದ ಉತ್ತರ ಕರ್ನಾಟಕ ಅತಿವೃಷ್ಟಿಗೆ ನಲುಗುತ್ತಿದೆ. ಆದರೆ ಸಚಿವರಿಲ್ಲದೆ ಅಲ್ಲಿನ ಜನತೆಯ ಗೋಳನು ಕೇಳುವವರಿಲ್ಲದಂತಾಗಿದೆ. ಸದನದಲ್ಲಿ ವಿಶ್ವಾಸಮತ ಯಾಚನೆಗೆ ತರಾತುರಿ ಮಾಡಿದ ಯಡಿಯೂರಪ್ಪ ಅವರು ಈಗ ಮುಖ್ಯಮಂತ್ರಿಯಾಗಿ ವಾರ ಕಳೆದರೂ ಸಂಪುಟ ವಿಸ್ತರಣೆ ಬಗ್ಗೆ ಮೌನವಾಗಿದ್ದಾರೆ. ಮಳೆಯಿಂದ ಡ್ಯಾಂ ರಕ್ಷಣೆಗಾಗಿ ಮಹಾರಾಷ್ಟ್ರದಿಂದ ರಾಜ್ಯಕ್ಕೆ ಹೆಚ್ಚುವರಿ ನೀರನ್ನು ಬಿಡಲಾಗುತ್ತಿದೆ. ಇದರಿಂದಾಗಿ ಉತ್ತರ ಕರ್ನಾಟಕದಲ್ಲಿ ಪ್ರವಾಹದ ಪರಿಸ್ಥಿತಿ ತಲೆದೋರಿದೆ. ಆದರೆ ಅಲ್ಲಿನವರ ಕಷ್ಟವನ್ನು ವಿಚಾರಿಸುವವರೇ ಇಲ್ಲವಾಗಿದೆ ಎಂದು ಖಾದರ್ ಆರೋಪಿಸಿದರು.

ಗೋಷ್ಠಿಯಲ್ಲಿ ಮಂಗಳೂರು ತಾಪಂ ಅಧ್ಯಕ್ಷ ಮುಹಮ್ಮದ್ ಮೋನು, ಸದಾಶಿವ ಉಳ್ಳಾಲ್, ಈಶ್ವರ ಉಳ್ಳಾಲ್, ಪ್ರಥ್ವಿರಾಜ್ ಮೊದಲಾದವರು ಉಪಸ್ಥಿತರಿದ್ದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News