ಮಾದಕ ವ್ಯಸನ ವಿರೋಧಿ ‘ಸೆಲ್ಫಿ ವಿದ್ ಸಹಿ’ ಅಭಿಯಾನ
ಮಣಿಪಾಲ, ಆ.3: ಯುವಜನತೆ ಇಂದು ಕುತೂಹಲಕ್ಕೆ ಒಳಗಾಗಿ ಮಾದಕ ವ್ಯಸನಕ್ಕೆ ಬಲಿಯಾಗುತ್ತಿದ್ದಾರೆ. ಅಪಾಯದ ದಾರಿಯಲ್ಲಿ ಸಾಗುವಂತೆ ಮಾಡಿ ಅಪರಾಧ ಚಟುವಟಿಕೆಗೆ ಇಳಿಸುವ ಈ ವ್ಯಸನದ ಕುರಿತು ಅರಿವು ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಮಾದಕ ದ್ರವ್ಯವನ್ನು ಯುವ ಸಮುದಾಯ ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ನಿಶಾ ಜೇಮ್ಸ್ ಹೇಳಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಹಾಗೂ ರೋಟರಿ ಕ್ಲಬ್ ಉಡುಪಿ ರಾಯಲ್ ಸಹಭಾಗಿತ್ವದಲ್ಲಿ ಮಾದಕ ವ್ಯಸನ ವಿರೋಧಿ ಮಾಸಾಚರಣೆ ಪ್ರಯುಕ್ತ ಶನಿವಾರ ಮಣಿಪಾಲ ಕೆನರಾ ಮಾಲ್‌ನಲ್ಲಿ ಆಯೋಜಿಸಲಾದ ಸೆಲ್ಫಿ ವಿದ್ ಸಹಿ ಅಭಿ ಯಾನದಲ್ಲಿ ಅವರು ಮಾತನಾಡುತಿದ್ದರು.
ಅಭಿಯಾನಕ್ಕೆ ಚಾಲನೆ ನೀಡಿದ ತುಳು ಹಾಗೂ ಕನ್ನಡ ಚಿತ್ರನಟ ಪೃಥ್ವಿ ಅಂಬರ್ ಮಾತನಾಡಿ, ಕುತೂಹಲ ಹಾಗೂ ಮಾನಸಿಕ ಸಮಸ್ಯೆಯಿಂದಾಗಿ ಆರಂಭವಾಗುವ ಮಾದಕ ವ್ಯಸನ ಚಟವು ಮುಂದೆ ನಮ್ಮನ್ನು ದಾಸರನ್ನಾಗಿ ಮಾಡುತ್ತದೆ. ಇದರಿಂದಾಗಿ ಅಪರಾಧ ಚಟುವಟಿಕೆ, ಏಕಾಂಗಿತನ, ಮಾನಸಿಕ ಕಾಯಿಲೆಗಳಿಗೆ ತುತ್ತಾಗುತ್ತೇವೆ. ಈ ಮೂಲಕ ನಮ್ಮ ಸಾಮಾಜಿಕ ಹಾಗೂ ಕೌಟುಂಬಿ ಬದುಕನ್ನು ನಾವೇ ಹಾಳು ಮಾಡಿಕೊಳ್ಳುತ್ತೇವೆ. ಈ ನಿಟ್ಟಿನಲ್ಲಿ ಯುವ ಸಮುದಾಯ ಮಾದಕ ವ್ಯಸನದಿಂದ ದೂರ ಉಳಿಯಬೇಕು ಎಂದರು.
ಮುಖ್ಯ ಅತಿಥಿಗಳಾಗಿ ರೋಟರಿ ಕ್ಲಬ್ ಅಧ್ಯಕ್ಷ ಯಶವಂತ್, ಕೆನರಾ ಮಾಲ್ ಮೆನೇಜರ್ ಪ್ರಕಾಶ್ ಕಾಮತ್, ದಿನೇಶ್ ಹೆಗ್ಡೆ ಆತ್ರಾಡಿ, ರೋಟರ್ಯಾಕ್ಟ್ ಕ್ಲಬ್‌ನ ಆಶೀರ್ ಉಪಸ್ಥಿತರಿದ್ದರು. ಉಡುಪಿ ಡಿವೈಎಸ್ಪಿ ಜೈಶಂಕರ್ ವಂದಿಸಿದರು. ಶಿವಾನಂದ ನಾರಿ ಕಾರ್ಯಕ್ರಮ ನಿರೂಪಿಸಿದರು.