ಧಾರ್ಮಿಕ ಶಿಕ್ಷಣವೊಂದೇ ಸಾಲದು ಆಧುನಿಕ ಶಿಕ್ಷಣವೂ ಬೇಕು: ಡಾ. ಝಹೀರ್
ಭಟ್ಕಳ: ಮುಸ್ಲಿಮ್ ಸಮುದಾಯದಲ್ಲಿ ಧಾರ್ಮಿಕ ಶಿಕ್ಷಣಕ್ಕೆ ಹೆಚ್ಚಿನ ಒಲವು ಕಂಡುಬರುತ್ತಿದ್ದು ಕೇವಲ ಧಾರ್ಮಿಕ ಶಿಕ್ಷಣವೊಂದಿದ್ದರೆ ಸಾಲದು ಅದರ ಜತೆಗೆ ಆಧುನಿಕ ಶಿಕ್ಷಣವೂ ಬೇಕು ಅದು ಈ ಕಾಲದ ಬೇಡಿಕೆಯಾಗಿದೆ ಎಂದು ಮುಂಬಯಿ ಅಂಜುಮನ್ ಇಸ್ಲಾಮ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಶಿಕ್ಷಣ ತಜ್ಞ ಡಾ.ಝಹೀರ್ ಖಾಝಿ ಹೇಳಿದರು.
ಅವರು ಶುಕ್ರವಾರ ಸಂಜೆ ಇಸ್ಲಾಮಿಯ ಆಂಗ್ಲೋ ಉರ್ದು ಪ್ರೌಢಶಾಲಾ ಮೈದಾನದಲ್ಲಿ ರಾಬಿತಾ ಸೂಸೈಟಿ ಆಯೋಜಿಸಿದ್ದ ಪ್ರತಿಷ್ಟಿತ ‘ರಾಬಿತಾ ಶೈಕ್ಷಣಿಕ ಪುರಸ್ಕಾರ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದು ಮಾತನಾಡಿದರು.
ಮಾತೃಭಾಷೆ ಶಿಕ್ಷಣದ ಕುರಿತಂತೆ ಪಾಲಕರಲ್ಲಿ ಅಸಡ್ಡೆ ಮನೋಭಾವನೆಯಿದ್ದು ತಮ್ಮ ಮಕ್ಕಳನ್ನು ಆಂಗ್ಲ ಮಾಧ್ಯಮ ಶಾಲೆಗಳಲ್ಲಿ ಕಲಿಸುವ ಸ್ಪರ್ಧೆಗಿಳಿದಿದ್ದಾರೆ. ಉರ್ದು ಮಾಧ್ಯಮ ಶಾಲೆಗಳು ಮುಚ್ಚುವ ಹಂತಕ್ಕೆ ತಲುಪಿದ್ದು ಆಡಳಿತ ಮಂಡಳಿಯವರು ಈ ಕುರಿತಂತೆ ಜಾಗೃತೆ ವಹಿಸಿ ಯಾವುದೇ ಕಾರಣಕ್ಕೂ ಉರ್ದು ಮಾಧ್ಯಮ ಶಾಲೆಗಳು ಸ್ಥಗಿತಗೊಳ್ಳದಂತೆ ನೋಡಿಕೊಳ್ಳಬೇಕು ಎಂದ ಅವರು, ಭಾಷಾ ಶಿಕ್ಷಣ ಪಡೆದು ಯಶಸ್ಸನ ಉತ್ತುಂಗಕ್ಕೇರಿದ ದೇಶದ ಖ್ಯಾತ ಉದ್ಯಮಿ ಹಾಗೂ ಉದ್ಯೋಗಪತಿ ಅಸ್ಲಮ್ ಖಾನ್ ಹಾಗೂ ಬೆಳಗಾವಿಯ ಬಡಕುಟುಂಬದಿಂದ ಬಂದ ಡಾ.ಜಬೀನ್ ಖಾಝಿಯವರ ಯಶೋಗಾಥೆಯನ್ನು ಮನಮುಟ್ಟುವಂತೆ ವಿವರಿಸಿದರು.
ನಕರಾತ್ಮಕ ಚಿಂತನೆಗಳಿಂದ ದೂರವಿದ್ದು ಸಾಮಾಜಿಕ ಸಮಗ್ರತೆಯತ್ತ ಗಮನ ಹರಿಸುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಅವರು ಭಟ್ಕಳವು ಹಲವು ಪ್ರತಿಭಾವಂತರನ್ನು ಹೊಂದಿದೆ. ಇಲ್ಲಿನ ಜುಕಾಕೋ ಶಮ್ಸುದ್ದಿನ್, ಡಾ.ಎಂ.ಟಿ.ಹಸನ್ ಬಾಪಾ ಮುಂಬೈಯ ಅಂಜುಮನ್ ಇಸ್ಲಾಮ್ ಸಂಸ್ಥೆಗೆ ಬಹಳಷ್ಟು ಕೊಡುಗೆಗಳನ್ನು ನೀಡಿದ್ದಾರೆ. ಈ ದೇಶದ ಶಿಕ್ಷಣ ಕ್ಷೇತ್ರಕ್ಕೆ ಮುಸ್ಲಿಮರು ಬಹಳಷ್ಟು ಕೊಡುಗೆಯನ್ನು ನೀಡಿದ್ದಾರೆ ಎಂದರು.
ಮುಸ್ಲಿಂ ಸಮಾಜದಲ್ಲಿ ಯುವಕರು ಓದಿನಲ್ಲಿ ಸಾಧನೆ ಮಾಡುವಲ್ಲಿ ಹಿಂದೆ ಇದ್ದಾರೆ. ಆದರೆ ಯುವತಿಯರು ಸಾಧನೆಯ ಹಾದಿಯಲ್ಲಿ ನಾವು ಎಲ್ಲಿದ್ದೇವೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪ್ರತಿಯೋರ್ವರೂ ಕೂಡಾ ಸ್ವ ಪ್ರಯತ್ನದಿಂದ ಮುಂದೆ ಬರಬೇಕಾಗಿದೆ. ನಾವು ಅವಕಾಶವನ್ನು ನೀಡಿದರೆ ರಾಷ್ಟ್ರ ಮಟ್ಟದಲ್ಲಿಯೂ ಕೂಡಾ ಸಾಧನೆ ಮಾಡಬಲ್ಲೆವು ಎನ್ನುವುದನ್ನು ಹಲವಾರು ಯುವತಿಯರು ತೋರಿಸಿಕೊಟ್ಟಿದ್ದಾರೆ ಎನ್ನುವುದನ್ನು ಉದಾಹರಣೆ ಸಹಿತ ವಿವರಿಸಿದರು.
ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ರಾಬಿತಾ ಸಂಸ್ಥೆ ನೀಡಿದ ಗೌರವ ಪುರಸ್ಕಾರವನ್ನು ಸ್ವೀಕರಿಸಿ ಮಾತನಾಡಿದ ಅಂಜುಮನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಅಬ್ದುಲ್ ರಹೀಮ್ ಜುಕಾಕೋ, ಸಾಧನೆಯನ್ನುವುದು ಸುಲಭವಾಗಿ ಕೈಗೆಟಕುವ ವಸ್ತುವಲ್ಲ. ಅದಕ್ಕೆ ಹಲವಾರು ವರ್ಷಗಳ ಪರಿಶ್ರಮ ಬೇಕು. ಇದು ಹೂವಿನ ಹಾಸಿಗೆಯಾಗಿರುವುದಿಲ್ಲ. ಟೀಕೆ ಟಿಪ್ಪಣೆ, ವಿಮರ್ಶೆ, ಪ್ರಶಂಸೆಗಳನ್ನು ಸಮಾನವಾಗಿ ಸ್ವೀಕರಿಸುವ ಛಲವಿರಬೇಕು ಎಂದರು.
ಈ ಸಂದರ್ಭದಲ್ಲಿ ತಮ್ಮ ಉತ್ತಮ ಸೇವೆಗಾಗಿ ರಾಷ್ಟ್ರಪತಿಗಳ ಪದಕವನ್ನು ಗಳಿಸಿದ ಇಲ್ಲಿನ ಉಪ ವಿಭಾಗದ ಉಪಾಧೀಕ್ಷಕ ವೆಲೆಂಟೈನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ರಾಬಿತಾ ಸೊಸೈಟಿಯ ಅಧ್ಯಕ್ಷ ಝಾಹಿದ್ ರುಕ್ನುದ್ದೀನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಅಂತಾಷ್ಟ್ರೀಯ ಮಟ್ಟದಲ್ಲಿ ಸಾಧನೆ ಮಾಡಿದ ಭಟ್ಕಳದ ವಿದ್ಯಾರ್ಥಿಗಳನ್ನು, ಎಸ್.ಎಸ್.ಎಲ್.ಸಿ., ಪಿ.ಯು.ಸಿ. ಮತ್ತು ಪದವಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು, ಭಟ್ಕಳದವರಾಗಿದ್ದು ಬೇರೆ ಬೇರೆ ರಾಜ್ಯದಲ್ಲಿ ಸಾಧನೆ ಮಾಡಿದವರನ್ನು ಚಿನ್ನದ ಪದಕ ಹಾಗೂ ಪ್ರಶಸ್ತಿ ಪತ್ರನ್ನು ನೀಡಿ ಪುರಸ್ಕರಿಸಲಾಯಿತು.
ಕಾರ್ಯಕ್ರಮದಲ್ಲಿ ರಾಬಿತಾ ಸೊಸೈಟಿಯ ಪ್ರಧಾನ ಕಾರ್ಯದರ್ಶಿ ಯುನೂಸ್ ಖಾಜಿಯಾ,ಕಾರ್ಯದರ್ಶಿ ಮೌಲ್ವಿ ತನ್ವೀರ್ ಜುಷಧಿ, ಮರ್ಕಝಿ ಖಲೀಫಾ ಜಮಾತುಲ್ ಮುಸ್ಲಿಮೀನ್‍ನ ಖಾಜಿ ಮೌಲಾನಾ ಖ್ವಾಜಾ ಮೊಹಿನುದ್ದೀನ್ ಅಕ್ರಮಿ ಮದನಿ, ತಂಝೀಮ್ ಅಧ್ಯಕ್ಷ ಎಸ್. ಎಂ. ಸೈಯದ್ ಪರ್ವೇಜ್, ಮೌಲಾನಾ ಅಬ್ದುಲ್ ಅಜೀಮ್ ಖಾಜಿಯಾ ಉಪಸ್ಥಿತರಿದ್ದರು. ಮಹಿಳಾ ವೇದಿಕೆಯಲ್ಲಿ ಫರ್‍ಹತ್ ಅಕ್ರಮಿ, ಡಾ. ಫರ್ಜಾನಾ ಎಂ. ಮೊಹತೆಶಂ ಉಪಸ್ಥಿತರಿದ್ದರು.
ಅಬ್ದುಲ್ಲಾ ರಾಜಿ ಖುರಾನ್ ಪಠಣ ಮಾಡಿದರು. ಮೊಹಮ್ಮದ್ ಯುಸುಫ್ ಬರ್ಮಾವರ್ ನಿರೂಪಿಸಿದರು. ಆಫ್ತಾಬ್ ಎಂ.ಜೆ. ಧನ್ಯವಾದ ಅರ್ಪಿಸಿದರು.