ಏಶ್ಯದಲ್ಲಿ ನೂತನ ಕ್ಷಿಪಣಿಗಳ ಕ್ಷಿಪ್ರ ನಿಯೋಜನೆ: ಎಸ್ಪರ್

Update: 2019-08-03 16:20 GMT

ಸಿಡ್ನಿ, ಆ. 3: ಏಶ್ಯದಲ್ಲಿ ಚೀನಾದ ಪ್ರಾಬಲ್ಯವನ್ನು ಎದುರಿಸಲು ಆ ವಲಯದಲ್ಲಿ ನೂತನ ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ಕ್ಷಿಪ್ರವಾಗಿ ನಿಯೋಜಿಸಲು ಅಮೆರಿಕ ಬಯಸಿದೆ ಎಂದು ಅಮೆರಿಕದ ನೂತನ ರಕ್ಷಣಾ ಕಾರ್ಯದರ್ಶಿ ಮಾರ್ಕ್ ಎಸ್ಪರ್ ಶನಿವಾರ ಹೇಳಿದ್ದಾರೆ.

ಏಶ್ಯದಲ್ಲಿ ನೂತನ ಮಧ್ಯಮ ವ್ಯಾಪ್ತಿಯ ಸಾಂಪ್ರದಾಯಿಕ ಕ್ಷಿಪಣಿಗಳನ್ನು ನಿಯೋಜಿಸುವ ಬಗ್ಗೆ ಅಮೆರಿಕ ಪರಿಶೀಲನೆ ನಡೆಸುತ್ತಿದೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್ಪರ್, ‘‘ಹೌದು, ಹಾಗೆ ಮಾಡಲು ನಾನು ಬಯಸಿದ್ದೇನೆ’’ ಎಂದರು.

ರಶ್ಯದೊಂದಿಗಿನ ಇಂಟರ್‌ಮೀಡಿಯಟ್-ರೇಂಜ್ ನ್ಯೂಕ್ಲಿಯರ್ ಫೋರ್ಸಸ್ (ಐಎನ್‌ಎಫ್) ಒಪ್ಪಂದದಿಂದ ಅಮೆರಿಕ ಹಿಂದೆ ಬಂದಿರುವ ಹಿನ್ನೆಲೆಯಲ್ಲಿ, ಅದು ಮಧ್ಯಮ ವ್ಯಾಪ್ತಿಯ ಕ್ಷಿಪಣಿಗಳನ್ನು ನಿಯೋಜಿಸಬಹುದಾಗಿದೆ.

‘‘ನಾವು ಆದಷ್ಟು ಬೇಗ ಈ ಮಾದರಿಯ ಕ್ಷಿಪಣಿಗಳನ್ನು ನಿಯೋಜಿಸಲು ಬಯಸುತ್ತೇವೆ’’ ಎಂದು ಆಸ್ಟ್ರೇಲಿಯದ ಸಿಡ್ನಿಗೆ ಹೋಗುವ ವಿಮಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ ಅವರು ಹೇಳಿದರು.

ಎಸ್ಪರ್ ಒಂದು ವಾರ ಅವಧಿಯ ಏಶ್ಯ ಪ್ರವಾಸವನ್ನು ಆರಂಭಿಸಿದ್ದಾರೆ.

‘‘ತಿಂಗಳುಗಳ ಅವಧಿಯಲ್ಲೇ ಇದು ಸಂಭವಿಸಬೇಕು ಎಂದು ನಾನು ಬಯಸುತ್ತೇನೆ. ಆದರೆ, ಇಂಥ ವಿಷಯಗಳು ನಮ್ಮ ನಿರೀಕ್ಷೆಗಿಂತ ಹೆಚ್ಚಿನ ಸಮಯವನ್ನು ತೆಗೆದುಕೊಳ್ಳುತ್ತವೆ’’ ಎಂದು ನೂತನ ಪೆಂಟಗನ್ ಮುಖ್ಯಸ್ಥ ಅಭಿಪ್ರಾಯಪಟ್ಟರು.

ಆದರೆ, ಇಂಥ ಅಸ್ತ್ರಗಳನ್ನು ಎಲ್ಲಿ ನಿಯೋಜಿಸಲು ಅಮೆರಿಕ ಬಯಸುತ್ತದೆ ಎಂಬುದನ್ನು ಅಮೆರಿಕ ರಕ್ಷಣಾ ಸಚಿವರು ತಿಳಿಸಲಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News