ಡಬಲ್ ಏಜೆಂಟ್‌ಗೆ ವಿಷಪ್ರಾಶನ: ರಶ್ಯದ ಮೇಲೆ ಅಮೆರಿಕ ದಿಗ್ಬಂಧನ
ಸಿಡ್ನಿ, ಆ. 3: ಮಾಜಿ ಡಬಲ್ ಏಜಂಟ್ ಸರ್ಗೀ ಸ್ಕ್ರಿಪಾಲ್‌ಗೆ ಬ್ರಿಟನ್‌ನಲ್ಲಿ ವಿಷಪ್ರಾಶನ ಮಾಡಿದ ಘಟನೆಗೆ ಸಂಬಂಧಿಸಿ ಅಮೆರಿಕವು ರಶ್ಯದ ಮೇಲೆ ಶನಿವಾರ ದಿಗ್ಬಂಧನಗಳನ್ನು ವಿಧಿಸಿದೆ.
ರಶ್ಯದ ಪರವಾಗಿ ಬ್ರಿಟನ್‌ನಲ್ಲಿ ಬೇಹುಗಾರಿಕೆ ನಡೆಸಲು ಸ್ಕ್ರಿಪಾಲ್‌ರನ್ನು ನಿಯೋಜಿಸಲಾಗಿತ್ತು. ಆದರೆ, ಅವರು ರಶ್ಯಕ್ಕೆ ಸಂಬಂಧಿಸಿದ ಬೇಹುಗಾರಿಕೆ ಮಾಹಿತಿಗಳನ್ನು ಬ್ರಿಟನ್‌ಗೂ ನೀಡುತ್ತಿದ್ದರು (ಡಬಲ್ ಏಜಂಟ್ ಆಗಿ ಕೆಲಸ ಮಾಡುತ್ತಿದ್ದರು).
2018ರ ಮಾರ್ಚ್‌ನಲ್ಲಿ ಬ್ರಿಟನ್‌ನ ನಗರ ಸ್ಯಾಲಿಸ್‌ಬರಿಯಲ್ಲಿ ರಶ್ಯದ ಏಜಂಟರು ಸ್ಕ್ರಿಪಾಲ್ ಮತ್ತು ಅವರ ಮಗಳಿಗೆ ನೊವಿಚೊಕ್ ಎಂಬ ಪದಾರ್ಥದ ಮೂಲಕ ವಿಷಪ್ರಾಶನ ಮಾಡಿದ್ದರು. ಬಳಿಕ ಅವರಿಬ್ಬರೂ ಚೇತರಿಸಿಕೊಂಡಿದ್ದಾರೆ.
ಅಂತರ್‌ರಾಷ್ಟ್ರೀಯ ಹಣಕಾಸು ಸಂಸ್ಥೆಗಳು ರಶ್ಯಕ್ಕೆ ಇನ್ನೂ ಹೆಚ್ಚಿನ ಸಾಲ ಅಥವಾ ಆರ್ಥಿಕ ಅಥವಾ ತಾಂತ್ರಿಕ ನೆರವನ್ನು ನೀಡುವುದನ್ನು ಅಮೆರಿಕ ವಿರೋಧಿಸುತ್ತದೆ ಹಾಗೂ ರಶ್ಯದ ಸರಕಾರಕ್ಕೆ ಅಮೆರಿಕದ ಬ್ಯಾಂಕ್‌ಗಳು ಸಾಲ ನೀಡುವುದರ ಮೇಲೆ ಮಿತಿಗಳನ್ನು ವಿಧಿಸುತ್ತದೆ ಎಂದು ಅಮೆರಿಕದ ವಿದೇಶಾಂಗ ಇಲಾಖೆಯ ವಕ್ತಾರೆ ಮೋರ್ಗನ್ ಓರ್ಟಗಸ್ ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ರಶ್ಯಕ್ಕೆ ಸರಕು ಮತ್ತು ತಂತ್ರಜ್ಞಾನ ರಫ್ತನ್ನೂ ಅಮೆರಿಕ ಸೀಮಿತಗೊಳಿಸುತ್ತದೆ ಎಂದು ಓರ್ಟಗಸ್ ನುಡಿದರು.