ಹಾಂಕಾಂಗ್: ಸರಕಾರಿ ವಿರೋಧಿ ಪ್ರತಿಭಟನೆಯಲ್ಲಿ ಭಾಗವಹಿಸಿದ ಸರಕಾರಿ ನೌಕರರು
ಹಾಂಕಾಂಗ್, ಆ. 3: ಹಾಂಕಾಂಗ್‌ನಲ್ಲಿ ಶುಕ್ರವಾರ ಸಾವಿರಾರು ಸರಕಾರಿ ನೌಕರರು ಸರಕಾರ ವಿರೋಧಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಎರಡು ತಿಂಗಳುಗಳ ಹಿಂದೆ ಪ್ರತಿಭಟನೆಗಳು ಆರಂಭಗೊಂಡಂದಿನಿಂದ ಅವರು ಭಾಗವಹಿಸುತ್ತಿರುವುದು ಇದು ಮೊದಲ ಬಾರಿಯಾಗಿದೆ.
ರಾಜಕೀಯವಾಗಿ ತಟಸ್ಥರಾಗಿ ಉಳಿಯುವಂತೆ ಸರಕಾರ ನೀಡಿರುವ ಎಚ್ಚರಿಕೆಯನ್ನು ಉಲ್ಲಂಘಿಸಿ ಸರಕಾರಿ ನೌಕರರು ಪ್ರತಿಭಟನೆಗೆ ಧುಮುಕಿದ್ದಾರೆ.
ಹಾಂಕಾಂಗ್‌ನ ಆರೋಪಿಗಳನ್ನು ವಿಚಾರಣೆಗಾಗಿ ಮಾತೃದೇಶ ಚೀನಾಕ್ಕೆ ಗಡಿಪಾರು ಮಾಡುವ ಮಸೂದೆಯನ್ನು ವಿರೋಧಿಸಿ ಬೃಹತ್ ಪ್ರತಿಭಟನೆಗಳು ಆರಂಭಗೊಂಡಿವೆ. ಈ ನಡುವೆ, ಪೊಲೀಸರ ಅತಿ ಬಲಪ್ರಯೋಗ ಮತ್ತು ಭೂಗತ ಪಾತಕಿಗಳಿಂದ ಪ್ರತಿಭಟನಕಾರರಿಗೆ ರಕ್ಷಣೆ ನೀಡುವಲ್ಲಿ ಪೊಲೀಸರ ವೈಫಲ್ಯವನ್ನು ವಿರೋಧಿಸಿಯೂ ಜನರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ.
ಹಾಂಕಾಂಗ್ ಸರಕಾರದ ಮುಂದೆ ಹಲವು ಬೇಡಿಕೆಗಳನ್ನು ಇಡುವ, ಸರಕಾರಿ ನೌಕರರನ್ನು ಪ್ರತಿನಿಧಿಸುತ್ತಿರುವುದಾಗಿ ಹೇಳಿಕೊಂಡ ಗುಂಪೊಂದು ಬರೆದ ಪತ್ರವೊಂದು ಫೇಸ್‌ಬುಕ್‌ನಲ್ಲಿ ಪ್ರಸಾರಗೊಂಡ ಬಳಿಕ ಶುಕ್ರವಾರದ ಪ್ರತಿಭಟನೆಯಲ್ಲಿ ಸರಕಾರಿ ನೌಕರರು ಭಾಗವಹಿಸಿದ್ದಾರೆ.