ಮಾನವೀಯತೆ ಇಲ್ಲದ ಪದವಿ ನಿಷ್ಪ್ರಯೋಜಕ: ವಿಶು ಶೆಟ್ಟಿ

Update: 2019-08-03 17:00 GMT

ಉಡುಪಿ, ಆ.3: ಇಂದು ಸಂಸ್ಕೃತಿ ಮಾಯವಾಗಿರುವ ಪರಿಣಾಮ ಸಮಾಜ ದಲ್ಲಿ ಮಾನವೀಯತೆ ಇಲ್ಲವಾಗಿದೆ. ಮಾನವೀಯತೆ ಇಲ್ಲದ ಪದವಿ ಇದ್ದು ನಿಷ್ಪ್ರಯೋಜಕ ಎಂದು ಸಮಾಜ ಸೇವಕ ವಿಶು ಶೆಟ್ಟಿ ಅಂಬಲಪಾಡಿ ಹೇಳಿದ್ದಾರೆ.

ಉಡುಪಿಯ ಬಿಯಿಂಗ್ ಸೋಶಿಯಲ್ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ಸಹಕಾರದೊಂದಿಗೆ ಶನಿವಾರ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಆಯೋಜಿಸಲಾದ ‘ಕೂತು ಮಾತನಾಡುವ’ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ನಮ್ಮ ದುಡಿಮೆಯ ಒಂದಂಶವನ್ನು ಸಮಾಜ ಸೇವೆಗೆ ವಿನಿಯೋಗಿಸುವ ಮನೋಭಾವವನ್ನು ಎಲ್ಲರು ಬೆಳೆಸಿಕೊಳ್ಳಬೇಕು. ಸಮಾಜ ಸೇವೆ ಮಾಡಲು ಸಮಾಜ ಸೇವಕನೇ ಆಗಬೇಕಾಗಿಲ್ಲ. ಸಹಾಯ ಮಾಡುವ ಮನಸ್ಸು ಇರಬೇಕು. ಕಷ್ಟಕ್ಕೆ ಮಿಡಿಯುವ ಹೃದಯವನ್ನು ನಾವೆಲ್ಲರೂ ಬೆಳೆಸಿಕೊಳ್ಳಬೇಕು ಎಂದರು.

ಯುವ ಸಮುದಾಯವನ್ನು ದುರಂತದಿಂದ ತಪ್ಪಿಸುವ ಪ್ರಯತ್ನ ಆಗಬೇಕು. ನಿಸ್ವಾರ್ಥ ಸೇವೆ ಮಾಡಿದರೆ ನಮಗೆ ಬೇರೆ ಎಲ್ಲಿಂದಾದರೂ ಪ್ರತಿಫಲ ಸಿಗುತ್ತದೆ. ನಮ್ಮ ಕೆಲಸವನ್ನು ದೇವರು ನೋಡುತ್ತಾನೆ. ಕಷ್ಟ ಬಂದಾಗ ಎದುರಿಸುವ ಶಕ್ತಿಯನ್ನು ತಂದೆ ತಾಯಿ ನೀಡಬೇಕು. ಶಿಕ್ಷಕರು ಅದನ್ನು ಧಾರೆ ಎರೆಯಬೇಕು ಎಂದು ಅವರು ತಿಳಿಸಿದರು.

ಮನುಷ್ಯ ಒಂದೊಂದು ಸುಖಕ್ಕಾಗಿ ಅಪೇಕ್ಷೆ ಪಡುತ್ತಾನೆ. ಅದಕ್ಕಾಗಿ ಜೀವನದಲ್ಲಿ ಹಾತೊರೆಯುತ್ತಾನೆ. ಆದರೆ ನನಗೆ ಕಷ್ಟದಲ್ಲಿರುವವರ ಮುಖದಲ್ಲಿ ನಗು ನೋಡುವುದು ಮತ್ತು ನೋವಲ್ಲಿರುವವರ ಕಣ್ಣೀರು ಒರೆಸುವುದೇ ದೊ್ಡ ಸುಖ ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಹ್ಯುಮ್ಯಾನಿಟಿ ನಿರ್ಮಾಣದ ವಿಶು ಶೆಟ್ಟಿ ಕುರಿತ ‘ದೀನ ಬಂಧು’ ಸಾಕ್ಷಚಿತ್ರವನ್ನು ಬೀಡಿನಗುಡ್ಡೆ ರುದ್ರಭೂಮಿಯ ನಿರ್ವಹಕಿ ವನಜಾ ಪೂಜಾರಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಸಾಲಿಗ್ರಾಮ ಡಾ.ಶಿವ ರಾಮ ಕಾರಂತ ಅಧ್ಯಯನ ಕೇಂದ್ರದ ಸಂಸ್ಥಾಪಕಿ ಬಿ.ಮಾಲಿನಿ ಮಲ್ಯ, ಉಡುಪಿ ಡಿವೈಎಸ್ಪಿ ಟಿ.ಆರ್.ಜೈಶಂಕರ್, ಹ್ಯುಮ್ಯಾನಿಟಿ ಟ್ರಸ್ಟ್‌ನ ಸಂಸ್ಥಾಪಕ ರೋಶನ್ ಬೆಳ್ಮಣ್, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಜಿ.ವಿಜಯ, ಶ್ರೀ ತ್ರಿಕಣ್ಣೇಶ್ವರೀವಾಣಿ ಮಾಸ ಪತ್ರಿಕೆ ಸಂಪಾದಕ ತೇಜಶ್ವರ ರಾವ್ ಉಪಸ್ಥಿತರಿದ್ದರು.

ವೈದ್ಯಕೀಯ ಕ್ಷೇತ್ರದಲ್ಲಿ ಮೂರು ದಶಕಗಳಿಂದ ಸಮಾಜಮುಖಿ ಸೇವೆ ಸಲ್ಲಿಸು ತ್ತಿರುವ ಹೆಬ್ರಿಯ ಡಾ.ರಾಮಚಂದ್ರ ಐತಾಳ್ ಮತ್ತು ಡಾ.ಭಾರ್ಗವಿ ಐತಾಳ್ ದಂಪತಿಯನ್ನು ಗೌರವಿಸಲಾಯಿತು. ಬಿಯಿಂಗ್ ಸೋಶಿಯಲ್‌ನ ಅವಿನಾಶ್ ಕಾಮತ್ ಸ್ವಾಗತಿಸಿದರು. ಶ್ರೇಯಸ್ ಕೋ್ಯಾನ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News