×
Ad

ಉಡುಪಿ ನಗರಾಡಳಿತ ಸಂಸ್ಥೆಗಳ ಅಧ್ಯಕ್ಷ - ಉಪಾಧ್ಯಕ್ಷ ನೇಮಕಾತಿ

Update: 2019-08-03 22:37 IST

ಉಡುಪಿ, ಆ.3: ರಾಜ್ಯದಲ್ಲಿರುವ 274 ನಗರ ಸ್ಥಳೀಯ ಸಂಸ್ಥೆಗಳ ಪೈಕಿ ಪ್ರಥಮ ಹಂತದಲ್ಲಿ 109, ದ್ವಿತೀಯ ಹಂತದಲ್ಲಿ 101 ಸೇರಿ ಒಟ್ಟು 210 ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಮತ್ತು ನಗರ ಪಂಚಾಯತ್ ಮತ್ತಿತರ ನಗರಾಡಳಿತ ಸಂಸ್ಥೆಗಳಿಗೆ ಚುನಾವಣೆ ನಡೆದು ಒಂದು ವರ್ಷ ಕಳೆದಿದ್ದರೂ ಇನ್ನೂ ಅವುಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯಾಗಿಲ್ಲ. ಈ ಬಗ್ಗೆ ಉಂಟಾಗಿರುವ ಗೊಂದಲವನ್ನು ಪರಿಹರಿಸುವಂತೆ ವಿಧಾನಪರಿಷತ್ ಸದಸ್ಯರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಈ ನಗರ ಸ್ಥಳೀಯ ಸಂಸ್ಥೆಗಳ ಸಾಮಾನ್ಯ ಸಭೆಯನ್ನು ಕರೆಯದೇ ಇರುವುದರಿಂದ, 210 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಅಯ್ಕೆಯಾದ ಸಾವಿರಾರು ಕೌನ್ಸಿಲರ್‌ಗಳಿಗೆ ಪ್ರತಿನಿಧಿಯಾಗಿ ಕೆಲಸ ನಿರ್ವಹಿಸಲು ಸಾಧ್ಯವಾಗುತ್ತಿಲ್ಲ ಎಂದು ಅವರು ಮನವಿಯಲ್ಲಿ ವಿವರಿಸಿದ್ದಾರೆ.

ಪ್ರಜಾಪ್ರುತ್ವದಲ್ಲಿ ಜನಪ್ರತಿನಿಧಿಗಳ ಕೈಯಲ್ಲಿರಬೇಕಾದ ಆಡಳಿತ ಅಧಿಕಾರಿ ಗಳ ಕೈಯಲ್ಲಿಯೇ ಉಳಿದುಬಿಟ್ಟಿದೆ. ಹಿಂದಿನ ಸರಕಾರ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿಯನ್ನು ನಗರಾಡಳಿತ ಸಂಸ್ಥೆಗಳ ಚುನಾವಣೆಗೆ ಮೊದಲೆ ಪ್ರಕಟಿಸಿ, ನಂತರ ತಿದ್ದುಪಡಿಯ ಗೊಂದಲ ಏರ್ಪಟ್ಟಿದ್ದರಿಂದ ಈ ಸಮಸ್ಯೆ ಹುಟ್ಟಿಕೊಂಡಿದ್ದು, ಉಚ್ಛ ನ್ಯಾಯಲಯದಲ್ಲಿ 15 ಪ್ರಕರಣಗಳು ದಾಖಲಾಗಿವೆ. ರಾಜ್ಯದ ಬೆಂಗಳೂರು, ಧಾರವಾಡ ಮತ್ತು ಕಲ್ಬುರ್ಗಿ ಪೀಠಗಳಲ್ಲಿ ತಡೆಯಾಜ್ಞೆ ಇದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಈ ಕುರಿತು ಕಾನೂನು ಇಲಾಖೆಯೊಡನೆ ವ್ಯವಹರಿಸಿ ತಡೆಯಾಜ್ಞೆ ಇರುವ ಸಂಸ್ಥೆಗಳ ಪ್ರಕರಣ ಇತ್ಯರ್ಥಕ್ಕೆ ಸೂಕ್ತ ಪರಿಹಾರ ಒದಗಿಸಲು ಹಾಗೂ ಪ್ರಕರಣ ಗಳಿಲ್ಲದಿರುವ ಉಳಿದೆಲ್ಲಾ ನಗರ ಸಂಸ್ಥೆಗಳಿಗೆ ತಕ್ಷಣ ಅಧ್ಯಕ್ಷ- ಉಪಾಧ್ಯಕ್ಷರ ಚುನಾವಣೆ ನಡೆಸಿ ಅಧಿಕಾರ ಹಸ್ತಾಂತರಿಸುವಂತೆ ಕೋಟ ಶ್ರೀನಿವಾಸ ಪೂಜಾರಿ ಅವರು ಇಂದು ವಿಧಾನಸೌಧದ ಕಚೇರಿಯಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪಅವರನ್ನು ಭೇಟಿಯಾಗಿ ಮನವಿ ಸಲ್ಲಿಸಿದರು.

ಮನವಿಯನ್ನು ಆಲಿಸಿದ ಮುಖ್ಯಮಂತ್ರಿಗಳು ತಕ್ಷಣ ಕಡತವನ್ನು ಪರಿಶೀಲಿಸಿ ಸಂಬಂಧಿಸಿದ ಇಲಾಖೆಯೊಡನೆ ಚರ್ಚಿಸಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರೆಂದು ಕೋಟ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News