ಲೈಂಗಿಕ ದೌರ್ಜನ್ಯದ ವಿರುದ್ಧ ಅರಿವಿಗಾಗಿ ಮಲ್ಪೆ ಕಡಲ ಕಿನಾರೆಯಲ್ಲಿ ‘ಬೀಚ್ ರನ್’
ಉಡುಪಿ, ಆ.3: ಲೈಂಗಿಕ ದೌರ್ಜನ್ಯದ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಮಣಿಪಾಲ ರನ್ನರ್ ಕ್ಲಬ್, ಮಾಹೆ ಕ್ರೀಡಾ ಮಂಡಳಿಯ ಸಹಯೋಗದೊಂದಿಗೆ ‘ಬೀಚ್ ರನ್’ನ ಮೂರನೇ ಅಧ್ಯಾಯ ‘ಸ್ಪೂರ್ತಿಗಾಗಿ ಹೆಜ್ಜೆನಡೆ’ಯನ್ನು ನಾಳೆ ಮಲ್ಪೆ ಕಡಲ ಕಿನಾರೆಯಲ್ಲಿ ಆಯೋಜಿಸಿದೆ.
ಬೆಳಗ್ಗೆ 6 ಗಂಟೆಗೆ ಮಣಿಪಾಲದ ಮಾಹೆ ಬಿಲ್ಡಿಂಗ್ ಬಳಿ ಒಟ್ಟು ಸೇರುವ ಓಟಗಾರರು, ಅಲ್ಲಿಂದ ಮಲ್ಪೆಯ ಸಮುದ್ರ ಕಿನಾರೆಗೆ ತೆರಳಲಿದ್ದು, ಬೀಚ್ ರನ್ ಬೆಳಗ್ಗೆ 7 ಗಂಟೆಗೆ ಪ್ರಾರಂಭಗೊಳ್ಳಲಿದೆ. ಇವರು ಐದು ಹಾಗೂ ಹತ್ತು ಕಿ.ಮೀ. ದೂರವನ್ನು ಕ್ರಮಿಸಲಿದ್ದಾರೆ.
ಬೀಚ್ ರನ್ ಎಂಬ ಪರಿಕಲ್ಪನೆಯನ್ನು ಪ್ರಾರಂಭಿಸಿದವರು ಆಸ್ಟ್ರೇಲಿಯದ ಕ್ಲೈರೆ. ಲೈಂಗಿಕ ದೌರ್ಜನ್ಯದ ವಿರುದ್ಧ ಜನಜಾಗೃತಿಗಾಗಿ ಇವರು ವಿಶ್ವದಾದ್ಯಂತ ಬೀಚ್ ರನ್‌ನ್ನು ಆಯೋಜಿಸುತಿದ್ದಾರೆ. ಈಗಾಗಲೇ ಲೈಂಗಿಕ ದೌರ್ಜನ್ಯಕ್ಕೆ ತುತ್ತಾಗಿ, ಅದರ ಭಯಾನಕ ಪರಿಣಾಮಗಳನ್ನು ಎದುರಿಸುತ್ತಿರುವ ಸಂತ್ರಸ್ಥರಿಗೆ ಬದುಕಿನಲ್ಲಿ ಧೈರ್ಯತುಂಬಿ, ಬದುಕನ್ನು ದಿಟ್ಟವಾಗಿ ಎದುರಿಸಲು ಬೇಕಾದ ಮನೋಸೈರ್ಯವನ್ನು ತುಂಬುತಿದ್ದಾರೆ.
ಇದಕ್ಕಾಗಿಯೇ ಕ್ಲೈರೆ ಅವರು ತನ್ನ ಅಭಿಯಾನವನ್ನು ‘ಸ್ಪೂರ್ತಿಗಾಗಿ ಹೆಜ್ಜೆ ನಡೆ’ ಎಂದು ಹೆಸರಿಸಿದ್ದಾರೆ. ಕಾಲೇಜು ವಿದ್ಯಾರ್ಥಿನಿಯಾಗಿದ್ದಾಗ ಸ್ವತಹ ಲೈಂಗಿಕ ದೌರ್ಜನ್ಯಕ್ಕೆ ತುತ್ತಾದ ಕ್ಲೈರೆ, ತನಗಾದ ಅನ್ಯಾಯದ ವಿರುದ್ಧ ಕೋರ್ಟ್ ಮೆಟ್ಟಿಲೇರಿ ನ್ಯಾಯವನ್ನು ಪಡೆಯಲು ಅಸಾಧಾರಣವಾದ ಧೈರ್ಯ ಹಾಗೂ ತಾಳ್ಮೆಯನ್ನು ಪ್ರದರ್ಶಿಸಬೇಕಾಯಿತು.
ಇದಾದ ಬಳಿಕ ಅವರು ಲೈಂಗಿಕ ಹಿಂಸೆ, ಲೈಂಗಿಕ ದೌರ್ಜನ್ಯದ ಕುರಿತಂತೆ ಮಹಿಳೆಯರಲ್ಲಿ ಅರಿವು ಮೂಡಿಸಲು ಪಣತೊಟ್ಟು ವಿಶ್ವದಾದ್ಯಂತ ಪ್ರವಾಸ ನಡೆಸುತಿದ್ದಾರೆ.