×
Ad

ಮಂಗಳೂರು-ಪೂನಾ ಮಧ್ಯೆ ‘ಅಂಬಾರಿ’ ಸಂಚಾರ

Update: 2019-08-03 22:53 IST

ಮಂಗಳೂರು, ಆ.3: ಮಂಗಳೂರಿನಿಂದ ಪೂನಾಕ್ಕೆ ಪ್ರಯಾಣ ಬೆಳೆಸುವ ಪ್ರಯಾಣಿಕರ ಹಲವು ದಿನಗಳ ಕನಸು ನನಸಾಗಿದೆ. ಮಂಗಳೂರು-ಪೂನಾ ಮಧ್ಯೆ ಸಂಚರಿಸಲಿರುವ ‘ಅಂಬಾರಿ ಡ್ರೀಮ್ ಕ್ಲಾಸ್ ಮಲ್ಟಿ ಆಕ್ಸಿಲ್ ಸ್ಲೀಪರ್’ ಬಸ್‌ಗಳಿಗೆ ಶನಿವಾರ ಸಂಜೆ ಶಾಸಕ ವೇದವ್ಯಾಸ ಕಾಮತ್ ಬಿಜೈ ಕೆಎಸ್ಸಾರ್ಟಿಸಿ ನಿಲ್ದಾಣದಲ್ಲಿ ಚಾಲನೆ ನೀಡಿದರು.

‘ಜೋಡಿ ಅಂಬಾರಿ ಸ್ಲೀಪರ್ ಬಸ್‌ಗಳು ಮಂಗಳೂರಿಗೆ ಆಗಮಿಸಿದ್ದು, ಮಂಗಳೂರು-ಪೂನಾ ಮಧ್ಯೆ ಸಂಚಾರ ಆರಂಭವಾಗಿದೆ. ಜನಪ್ರಿಯವಾದ ಮಲ್ಟಿಆಕ್ಸಿಲ್ ಕ್ಲಬ್ ಕ್ಲಾಸ್ ಸೀಟರ್ ಬಸ್ ಹಾಗೂ ಶೌಚಾಲಯ ಹೊಂದಿರುವ ಫ್ಲೈ ಬಸ್‌ಗಳಲ್ಲಿ ಸಂಚರಿಸುತ್ತಿದ್ದ ಪ್ರಯಾಣಿಕರಿಗೆ ಇನ್ನು ಮುಂದೆ ಅಂಬಾರಿ ಡ್ರೀಮ್ ಕ್ಲಾಸ್‌ನಲ್ಲಿ ‘ಕನಸಿನೊಂದಿಗೆ ಪ್ರಯಾಣಿಸುವ’ ಮೂಲಕ ಪ್ರಯಾಣವನ್ನು ಇನ್ನೂ ಹಿತಕರವಾಗಿಸಲಿದೆ ಎಂದು ಶಾಸಕ ವೇದವ್ಯಾಸ ಕಾಮತ್ ಹೇಳಿದರು.

ಮಂಗಳೂರಿನಿಂದ ದೂರದ ಊರಿಗೆ ಪ್ರಯಾಣಿಸಲು ಅನುಕೂಲವಾಗುವಂತೆ ಇನ್ನೂ ಹೆಚ್ಚಿನ ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ಗಳು ಕರಾವಳಿಗೆ ಆಗಮಿಸಲಿದ್ದು, ಮೊದಲ ಹಂತದಲ್ಲಿ ಎರಡು ಬಸ್‌ಗಳು ಈಗಾಗಲೇ ಬಂದಿವೆ. ಇನ್ನು ಎರಡು ಹಂತದಲ್ಲಿ ಮೂರು ಬಸ್‌ಗಳು ಆಗಮಿಸಲಿದೆ. ಈ ಬಸ್‌ಗಳನ್ನು ಹೈದರಾಬಾದ್, ತಿರುಪತಿ, ಚೆನ್ನೈ, ಮುಂಬೈ, ಎರ್ನಾಕುಲಂಗಳಲ್ಲಿ ಸಂಚರಿಸಲಿದೆ ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಂ.ಅಶ್ರಫ್ ತಿಳಿಸಿದರು.

ಅಂಬಾರಿ ಮಾರ್ಗ- ಸಮಯ: ಮಂಗಳೂರಿನಿಂದ ಪೂನಾಕ್ಕೆ ತೆರಳುವ ಅಂಬಾರಿ ಡ್ರೀಮ್ ಕ್ಲಾಸ್ ಬಸ್‌ಗಳು ಮಂಗಳೂರು-ಉಡುಪಿ-ಕುಂದಾಪುರ-ಭಟ್ಕಳ-ಹೊನ್ನಾವರ-ಅಂಕೋಲಾ-ಹುಬ್ಬಳ್ಳಿ-ಬೆಳಗಾವಿ ಮಾರ್ಗದ ಮೂಲಕ ಮೂಲಕ ಪೂನಾಕ್ಕೆ ಪ್ರಯಾಣ ಬೆಳೆಸಲಿವೆ. ಮಂಗಳೂರು-ಪೂನಾ ಪ್ರಯಾಣ ದರ ಕೇವಲ 1,350 ರೂ. ಮಾತ್ರ ಇರಲಿದೆ. ಮಂಗಳೂರಿನಿಂದ ಬಸ್ ಬಿಡುವ ಸಮಯ ಸಂಜೆ 6 ಗಂಟೆ ಇದ್ದು, ಪೂನಾಕ್ಕೆ ಮರುದಿನ ಬೆಳಗ್ಗೆ 6:45ಕ್ಕೆ ತಲುಪಲಿದೆ. ಪೂನಾವನ್ನು ಸಂಜೆ 6:30ಕ್ಕೆ ಬಿಡುವ ಬಸ್ ಮಂಗಳೂರನ್ನು ಮರುದಿನ ಬೆಳಗ್ಗೆ 9:15ಕ್ಕೆ ಪ್ರಯಾಣಿಕರನ್ನು ತಲುಪಿಸಲಿದೆ.

ಅಂಬಾರಿ ಬಸ್‌ನ ವಿಶೇಷತೆ: ಕೆಎಸ್ಸಾರ್ಟಿಸಿಯ ಇತರ ಸ್ಲೀಪರ್ ಬಸ್‌ಗಳಿಗಿಂತ ಈ ಬಸ್ ಕೊಂಚ ವಿಭಿನ್ನವಾಗಿದ್ದು, ಆರಾಮದಾಯಕ ಪ್ರಯಾಣ ಬೆಳೆಸಬಹುದು. ಜೊತೆಗೆ ಪ್ರಯಾಣಿಕರಿಗೆ ಮೊಬೈಲ್ ಚಾರ್ಜ್ ಇರಿಸಲು ಪ್ರತ್ಯೇಕ ಚಾರ್ಜಿಂಗ್ ಪಾಯಿಂಟ್ ಕೂಡ ಇದೆ. ಪ್ರಯಾಣದ ಸುಖ ಅನುಭವಿಸಲು ಕಿಟಕಿಗಳು, ಹಾಗೂ ತುರ್ತು ನಿರ್ಗಮನ ಬಾಗಿಲುಗಳು, ಬೆಂಕಿ ಅನಾಹುತಗಳನ್ನು ಕೂಡಲೇ ತಪ್ಪಿಸಲು ಮುಂಜಾಗ್ರತಾ ಕ್ರಮವಾಗಿ ಫಯರ್ ಡಿಟೆಕ್ಷನ್ ಮತ್ತು ಸಪ್ರೆಶನ್ ಸಿಸ್ಟಂಗಳನ್ನು ಬಸ್‌ನಲ್ಲಿ ಅಳವಡಿಸಲಾಗಿದೆ.

ಅಂಬಾರಿ ಡ್ರೀಮ್ ಕ್ಲಾಸ್ ಬಸ್ 14.50 ಮೀಟರ್‌ನಷ್ಟು ವಿಶಾಲವಾಗಿದ್ದು, 32 ಸಿಟ್ಟಿಂಗ್ ಸೌಲಭ್ಯ ಇದೆ. ಜೊತೆಗೆ ಡ್ರೀಮ್ ಕ್ಲಾಸ್ 40 ಸೀಟು ಹೊಂದಿದೆ. ಸುಮಾರು 1.10 ಕೋಟಿ ರೂ. ವೆಚ್ಚದ ಅಂಬಾರಿ ಡ್ರೀಮ್ ಕ್ಲಾಸ್ ಎರಡು ಬಸ್‌ಗಳು ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗಕ್ಕೆ ಬಂದಿವೆ. ಈ ಬಸ್‌ಗಳು ಮಂಗಳೂರು-ಪೂನಾ ಮಧ್ಯೆ ಸಂಚರಿಸಲಿವೆ.

ಕಾಸರಗೋಡಿಗೆ 2 ವೋಲ್ವೋ

ಮಂಗಳೂರು ಮತ್ತು ಕಾಸರಗೋಡುವ ನಡುವೆ ಶನಿವಾರದಿಂದಲೇ ಎ.ಸಿ.ವೋಲ್ವೋ (ಐರಾವತ)ಬಸ್‌ಗಳು ಆರಂಭವಾದವು. ದಿನದಲ್ಲಿ 14 ಟ್ರಿಪ್ ಸಂಚರಿಸಲಿದ್ದು, ಪ್ರಯಾಣ ದರ ಕೇವಲ 75 ರೂ. ಇರಲಿದೆ. ವೋಲ್ವೋ ಸಾರಿಗೆಯು ಮಂಗಳೂರಿನಿಂದ ಕಾಸರಗೋಡಿಗೆ ಆರು ನಿಲುಗಡೆಗಳನ್ನು ಹೊಂದಿದೆ. ಕಡಿಮೆ ಪ್ರಯಾಣ ದರ 130 ರೂ.ನಲ್ಲಿ ದಲ್ಲಿ ದಿನದ ಪಾಸು (ಹೋಗಿ-ಬರುವ) ಗಳನ್ನು ವಿತರಿಸಲಾಗುವುದು ಎಂದು ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಕೆ.ಎಂ.ಅಶ್ರಫ್ ತಿಳಿಸಿದರು.

ಕರ್ನಾಟಕ ಸಮಗ್ರ ಪ್ರದೇಶ ಯೋಜನೆ ಜಾರಿಯಲ್ಲಿರುವುದರಿಂದ ಬೇಡಿಕೆಗೆ ಅನುಗುಣವಾಗಿ ಲಭ್ಯ ಸಂಪನ್ಮೂಲಗಳ ಆಧಾರಿತ ಹೊಸ ಸಾರಿಗೆ ವ್ಯವಸ್ಥೆಯನ್ನು ಹಂತ ಹಂತವಾಗಿ ಕಲ್ಪಿಸಲು ಯೋಜಿಸಲಾಗಿದೆ.
- ಕೆ.ಎಂ.ಅಶ್ರಫ್, ಮಂಗಳೂರು ಕೆಎಸ್ಸಾರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News