ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ಫಲಾನುಭವಿಗಳಾಗಿದ್ದಾರೆ: ಡಾ.ಬಿ.ಎಲ್.ಶಂಕರ್
ಮಂಗಳೂರು, ಆ.3: ಜಗತ್ತಿನ ಸಂವಿಧಾನಗಳ ಪೈಕಿ ಭಾರತದ ಸಂವಿಧಾನವು ಅತ್ಯಂತ ಶ್ರೇಷ್ಠವಾದುದು ಮತ್ತು ಬಲಿಷ್ಠವಾದುದು. ಡಾ.ಬಿ.ಆರ್.ಅಂಬೇಡ್ಕರ್ ವಿರಚಿತ ಈ ಸಂವಿಧಾನಕ್ಕೆ ಶರಣರ ಕಾಲದ ವಚನ ಸಾಹಿತ್ಯವು ಮೂಲ ಆಶಯವಾಗಿದೆ. ಹಿಂದೆ ಪ್ರಜೆಗಳೇ ಪ್ರಭುಗಳಾಗಿದ್ದರು. ಆದರೆ ಇಂದು ಪ್ರಜೆಗಳನ್ನು ಫಲಾನುಭವಿಗಳನ್ನಾಗಿ ಮಾರ್ಪಡಿಸಲಾಗಿದೆ. ಮತ್ತೆ ಕಲ್ಯಾಣ ಚಳುವಳಿಯ ಮೂಲಕ ಈ ಫಲಾನುಭವಿಗಳನ್ನು ಮತ್ತೆ ಪ್ರಭುತ್ವದ ಪ್ರಜೆಗಳನ್ನಾಗಿ ರೂಪಿಸಬೇಕಿದೆ ಎಂದು ಕರ್ನಾಟಕ ಚಿತ್ರಕಲಾ ಪರಿಷತ್ ಅಧ್ಯಕ್ಷ ಬಿ.ಎಲ್. ಶಂಕರ್ ಹೇಳಿದರು.
ನಾಡಿನಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಚಿತ್ರದುರ್ಗ ಜಿಲ್ಲೆಯ ಸಾಣೇಹಳ್ಳಿ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯ ಸಾರಥ್ಯದಲ್ಲಿ ಹಮ್ಮಿಕೊಳ್ಳಲಾದ ‘ಮತ್ತೆ ಕಲ್ಯಾಣ’ ಎಂಬ ರಾಜ್ಯಮಟ್ಟದ ಜನಾಂದೋಲನಕ್ಕೆ ಸಂಬಂಧಿಸಿ ಶನಿವಾರ ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜರುಗಿದ ಸಾರ್ವಜನಿಕ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ‘ವಚನ ಸಾಹಿತ್ಯ ಮತ್ತು ಸಂವಿಧಾನ’ ಎಂಬ ವಿಷಯದಲ್ಲಿ ಅವರು ಮಾತನಾಡಿದರು.
ದೇಶದ ಸಂವಿಧಾನವು ಏಕಾಏಕಿ ಹೇರಲ್ಪಟ್ಟಿಲ್ಲ. ಅದರ ಕರಡು ತಿದ್ದುಪಡಿಗೆ 7,635 ಸಲಹೆಗಳು ದೇಶಾದ್ಯಂತದ ಸಾರ್ವಜನಿಕರಿಂದ ಬಂದಿತ್ತು. ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನಕ್ಕೆ ಸಂಬಂಧಿಸಿ ನೀಡಿದ ಹೇಳಿಕೆಯು ಅತ್ಯಂಗ ಗಮನಾರ್ಹವಾದುದಾಗಿದೆ. ಅಂದರೆ, ಸಂವಿಧಾನದ ಆಶಯಕ್ಕೆ ಅನುಗುಣವಾಗಿ ನಡೆಯದಿದ್ದರೆ ಅಥವಾ ಅನುಷ್ಠಾನಗೊಳ್ಳದಿದ್ದರೆ ಅದು ಸಂವಿಧಾನದ ತಪ್ಪಲ್ಲ. ಕಾನೂನು ರೂಪಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡುವ ಮತದಾರರ ತಪ್ಪಾಗಿದೆ ಎಂದಿದ್ದರು. ದೇಶದ ಸದ್ಯದ ಸ್ಥಿತಿಯನ್ನು ಗಮನಿಸುವಾಗ ಈ ಮಾತು ಔಚಿತ್ಯಪೂರ್ಣವಾದುದು ಎಂಬುದು ಮನವರಿಕೆಯಾಗುತ್ತಿದೆ ಎಂದು ಬಿ.ಎಲ್.ಶಂಕರ್ ನುಡಿದರು.
ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿ ಮಾತನಾಡಿ ಮುಖವಾಡಗಳನ್ನು ಕಳಚಿ ಸಹಜವಾಗಿ ಬದುಕುವ ಪ್ರಯತ್ನ ಮಾಡಿದರೆ ವ್ಯಕ್ತಿ ಇನ್ನೊಷ್ಟು ಶಕ್ತಿಯುತವಾಗಿ ಬದುಕಲು ಸಾಧ್ಯ. ಮನುಷ್ಯ ಇಂದು ಅರ್ಥ, ಅಧಿಕಾರ, ರೂಪ ಮುಂತಾದ ಮದಗಳಿಂದ ಮದೋನ್ಮತ್ತನಾಗಿದ್ದಾನೆ. ‘ಮಾಡಿದೆನೆಂಬುದು ಮನದಲ್ಲಿ ಕಾಡಿದರೆ ಏಡಿಸಿ ಕಾಡಿತ್ತು ಮಾಯೆ ಎನ್ನುವ ಮೂಲಕ ಬಸವಣ್ಣ ತಮ್ಮ ವಿನಯವಂತಿಕೆಯನ್ನು ತೋರಿದ್ದಾರೆ. ‘ಎನಗಿಂತ ಕಿರಿಯರಿಲ್ಲ; ಶಿವಭಕ್ತನಿಗಿಂತ ಹಿರಿಯರಿಲ್ಲ’ ಎನ್ನುವ ವಿನಯವಂತಿಕೆಯನ್ನು ಬೆಳಸಿಕೊಳ್ಳದಿದ್ದರೆ ನಾವು ಅಹಂಕಾರದ ಮೊಟ್ಟೆಗಳಾಗುತ್ತೇವೆ ಎಂದರು.
ವಿನಯವಂತಿಕೆ, ಭಾಗುವ ಗುಣ ಇಲ್ಲದಿದ್ದರೆ ‘ಮತ್ತೆ ಕಲ್ಯಾಣ’ ಸಾಧ್ಯವಿಲ್ಲ. ಕಸಬರಿಕೆಯ ಕೆಲಸ ಕಸ ಇರುವಲ್ಲಿ ಕಸ ಗುಡಿಸುವುದು. ಯಾವ ಕಸಬರಿಕೆಯನ್ನು ಎಲ್ಲಿ ಬಳಸಬೇಕೆನ್ನುವ ವಿವೇಕವೂ ನಮಗಿದೆ. ನಾವೇ ಬುದ್ಧಿವಂತರು, ವಿವೇಕವಂತರು, ನಮ್ಮಂತೆ ಸಮಾಜಿಕ ಕಾಳಜಿಯುಳ್ಳವರು ಬೇರೆ ಯಾರೂ ಇಲ್ಲ ಎನ್ನುವ ಅಹಂಕಾರವನ್ನು ಕೆಲವರು ಬಿಡಬೇಕು. ನಮ್ಮ ವೇದಿಕೆ ಎಲ್ಲರನ್ನೂ ಒಳಗೊಳ್ಳುವ ವೇದಿಕೆಯಾಗಿದೆ. ಮುಂದಿನ ನವ ಸಮಾಜಕ್ಕಾಗಿ ಎಲ್ಲ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಟ್ಟಾಗಿ ಕೆಲಸ ಮಾಡುವುದು ಇಂದಿನ ಅಗತ್ಯವಾಗಿದೆ. ಅದನ್ನು ಯಾರು ಎಷ್ಟೇ ವಿರೋಧಿಸಿದರೂ ನಾವು ನಮ್ಮ ಪ್ರಯತ್ನ ಬಿಡುವುದಿಲ್ಲ. ಬಸವಣ್ಣನವರಿಗೆ ಬಂದಷ್ಟು ವಿಪತ್ತುಗಳು ಬೇರೆ ಯಾರಿಗೂ ಬಂದಿರಲಿಕ್ಕೆ ಸಾಧ್ಯವಿಲ್ಲ. ಆದರೂ ಅವರು ವಿವೇಕದಿಂದ ಎಲ್ಲವನ್ನೂ ಎದುರಿಸಿ ಯಶಸ್ವಿಯಾದರು. ಇದು ನಮಗೂ ಪ್ರೇರಣೆಯಾಗಿದೆ. ನಮ್ಮನ್ನು ಇಲ್ಲಿ ‘ಅಭಿನವ ಬಸವಣ್ಣ’ ಎಂದು ಬಣ್ಣಿಸಲಾಯಿತು. ಆದರೆ ಯಾವ ವ್ಯಕ್ತಿಗೂ ಅಭಿನವ ಬಸವಣ್ಣ ಎನ್ನುವ ಪದ ಬಳಕೆಯ ಯೋಗ್ಯತೆಯಿಲ್ಲ. ಮತ್ತೆ ಕಲ್ಯಾಣ ಕಾರ್ಯಕ್ರಮಕ್ಕೆ ಯಾವುದೇ ಮಡಿ-ಮೈಲಿಗೆಯಿಲ್ಲ. ಇಲ್ಲಿನ ‘ಮತ್ತೆ ಕಲ್ಯಾಣ’ದ ಸಂಘಟಕರಲ್ಲಿ ಮುಸ್ಲಿಂ, ಕ್ರೈಸ್ತ ಬಾಂಧವರು ಇದ್ದಾರೆ ಎಂಬುದನ್ನು ಮನಗಾಣಬೇಕು ಎಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವಾ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪ್ರಾಧ್ಯಾಪಕಿ ಡಾ.ಶುಭಾ ಮರವಂತೆ ‘ಶರಣರ ದೃಷ್ಟಿಯಲ್ಲಿ ಪರಿವರ್ತನೆ’ ಎಂಬ ವಿಷಯದಲ್ಲಿ ಮಾತನಾಡಿದರು.
‘ಮತ್ತೆ ಕಲ್ಯಾಣ’ ದ.ಕ. ಜಿಲ್ಲಾ ಸಮಿತಿಯ ಸಂಯೋಜಕ ಉಮರ್ ಯು.ಎಚ್. ಸ್ವಾಗತಿಸಿದರು. ಸಹಮತ ವೇದಿಕೆಯ ಸದಸ್ಯರಾದ ರೇಮಂಡ್ ಡಿಕುನ್ಹಾ ವಂದಿಸಿದರು. ತಾರನಾಥ ಗಟ್ಟಿ ಕಾಪಿಕಾಡ್ ಕಾರ್ಯಕ್ರಮ ನಿರೂಪಿಸಿದರು.
ಸಾಮರಸ್ಯದ ನಡಿಗೆ: ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಪುರಭವನದ ತನಕ ನಡೆದ ಸಾಮರಸ್ಯದ ನಡಿಗೆಯನ್ನು ಮಾಜಿ ಸಚಿವ ಯು.ಟಿ.ಖಾದರ್ ಉದ್ಘಾಟಿಸಿದರು. ಕರಾವಳಿಯ ಸಾಂಸ್ಕೃತಿಕ ವೈಭವವನ್ನು ಪ್ರತಿಬಿಂಭಿಸುವ ಕಲಾತಂಡಗಳು ಸಾಮರಸ್ಯದ ನಡಿಗೆಯ ಮೆರುಗನ್ನು ಹೆಚ್ಚಿಸಿತು.