ಚಂದ್ರಯಾನ-2 ಕಣ್ಣಿಗೆ ಭೂಮಿ ಕಂಡಿದ್ದು ಹೀಗೆ: 5 ಚಿತ್ರಗಳ ಬಿಡುಗಡೆ

Update: 2019-08-04 13:54 GMT

ಹೊಸದಿಲ್ಲಿ,ಆ.4: ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-2 ಸೆರೆಹಿಡಿದಿರುವ ಭೂಮಿಯ ಮೊದಲ ಐದು ಚಿತ್ರಗಳನ್ನು ಇಸ್ರೋ ರವಿವಾರ ಬಿಡುಗಡೆಗೊಳಿಸಿದೆ. ಪೆಸಿಫಿಕ್ ಸಾಗರ ಮತ್ತು ಅಮೆರಿಕ ಖಂಡದ ಭಾಗಗಳನ್ನು ತೋರಿಸುವ ಈ ಚಿತ್ರಗಳನ್ನು ಉಪಗ್ರಹವು ಶನಿವಾರ ರಾತ್ರಿ 10:58 ಮತ್ತು 11:07ರ ನಡುವೆ ಸೆರೆ ಹಿಡಿದಿದೆ.

ಚಂದ್ರಯಾನ-2ರ ಲ್ಯಾಂಡರ್ ‘ವಿಕ್ರಮ್’ಗೆ ಅಳವಡಿಸಿರುವ ಎಲ್14 ಕ್ಯಾಮೆರಾ 5,000 ಕಿ.ಮೀ.ದೂರದಿಂದ ಈ ಚಿತ್ರಗಳನ್ನು ತೆಗೆದಿದೆ.

ಚಿತ್ರಗಳು ಅತ್ಯಂತ ಸ್ಪಷ್ಟವಾಗಿವೆ ಮತ್ತು ಉಪಗ್ರಹವು ಪರಿಪೂರ್ಣವಾಗಿ ಕಾರ್ಯಾಚರಿಸುತ್ತಿದೆ ಎಂದು ತಿಳಿಸಿರುವ ಇಸ್ರೋ ಅಧ್ಯಕ್ಷ ಕೆ.ಶಿವನ್ ಅವರು,ಚಂದ್ರಯಾನ-2 ಅಭಿಯಾನದ ಈವರೆಗಿನ ಪ್ರಗತಿ ತನಗೆ ಅತ್ಯಂತ ಸಂತಸ ನೀಡಿದೆ. ಲ್ಯಾಂಡರ್ ತೆಗೆದಿರುವ ಚಿತ್ರಗಳು ಅದು ಚಂದ್ರನ ಮೇಲ್ಮೈನಲ್ಲಿ ಇಳಿಯುವಾಗಿನ ಆ ಆತಂಕಭರಿತ 15 ನಿಮಿಷಗಳಲ್ಲಿ ನಿರೀಕ್ಷೆಯಂತೆ ಕಾರ್ಯಾಚರಿಸಲಿದೆ ಎನ್ನುವುದನ್ನು ಸೂಚಿಸುತ್ತಿವೆ ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.

ಚಂದ್ರಯಾನ-2ರ ಒಡಲಲ್ಲಿರುವ ಲ್ಯಾಂಡರ್ ಮತ್ತು ರೋವರ್ ‘ಪ್ರಜ್ಞಾನ್’ಅನ್ನು ಸೆ.7ರಂದು ಚಂದ್ರನ ಮೇಲ್ಮೈ ಮೇಲೆ ಇಳಿಸಲು ಇಸ್ರೋ ಉದ್ದೇಶಿಸಿದೆ.

ಇಸ್ರೋ ಚಂದ್ರಯಾನ-2ರ ಕಕ್ಷೆಯನ್ನು ಹೆಚ್ಚಿಸುವ ಮೂರನೇ ಮತ್ತು ನಾಲ್ಕನೇ ಕಾರ್ಯಕ್ರಮವನ್ನು ಅನುಕ್ರಮವಾಗಿ ಜು.29 ಮತ್ತು ಆ.2ರಂದು ಯಶಸ್ವಿಯಾಗಿ ಪೂರೈಸಿದೆ.

  ಭಾರತದ ಎರಡನೇ ಚಂದ್ರ ಅಭಿಯಾನವಾಗಿರುವ ಚಂದ್ರಯಾನ-2ನ್ನು ಜು.22ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ ಧವನ್ ಅಂತರಿಕ್ಷ ಕ್ಷೇತ್ರದಿಂದ ಉಡಾವಣೆಗೊಂಡಿದ್ದ ಇಸ್ರೋದ ಅತ್ಯಂತ ಶಕ್ತಿಶಾಲಿ ರಾಕೆಟ್ ‘ಬಾಹುಬಲಿ’ ಯಶಸ್ವಿಯಾಗಿ ಬಾಹ್ಯಾಕಾಶ ಕಕ್ಷೆಗೆ ಸೇರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News