×
Ad

ಮಂಗಳೂರು: ಬೀದಿದೀಪದ ವಿದ್ಯುತ್ ಕಂಬಕ್ಕೆ ಬಸ್ ಢಿಕ್ಕಿ

Update: 2019-08-04 19:23 IST

ಮಂಗಳೂರು, ಆ.4: ಲಾಲ್‌ಬಾಗ್ ಸಮೀಪದ ಐಸ್‌ಕ್ರೀಸ್ ಮಳಿಗೆಯೊಂದರ ಬಳಿ ಖಾಸಗಿ ಬಸ್‌ವೊಂದು ಡಿವೈಡರ್ ಮೇಲೆ ಹತ್ತಿ ಬೀದಿದೀಪದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಘಟನೆ ರವಿವಾರ ಸಂಜೆ ನಡೆದಿದ್ದು, ಅವಘಡದಲ್ಲಿ ಮಗು ಸಹಿತ ನಾಲ್ವರು ಗಾಯಗೊಂಡಿದ್ದಾರೆ.

ಬಸ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಬಾಗಲಕೋಟೆ ಜಿಲ್ಲೆಯ ಜಮಖಂಡಿ ನಿವಾಸಿ ಕರಿಯಪ್ಪ ಭಂಗಿ (23), ಕೊಡಿಯಾಲ್‌ಬೈಲ್ ನಿವಾಸಿ ಕಿರಣ್ (28), ಸ್ಥಳೀಯ ನಿವಾಸಿಗಳಾದ ಶಂಕರ್ (28) ಹಾಗೂ ಶರತ್ (ಎರಡು ವರ್ಷ) ಗಾಯಾಳುಗಳು.

ಘಟನೆ ವಿವರ: ತಣ್ಣೀರುಬಾವಿಯಿಂದ ಪಿವಿಎಸ್ ಮಾರ್ಗವಾಗಿ ಸ್ಟೇಟ್‌ಬ್ಯಾಂಕ್‌ಗೆ ತೆರಳಬೇಕಿದ್ದ ಖಾಸಗಿ ಬಸ್ ಲಾಲ್‌ಬಾಗ್ ಸಮೀಪದ ಐಸ್‌ಕ್ರೀಸ್ ಮಳಿಗೆಯೊಂದರ ಬಳಿ ರಸ್ತೆಯ ಡಿವೈಡರ್ ಮೇಲೆ ಹತ್ತಿ, ಬೀದಿದೀಪದ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದಿದೆ. ಅವಘಡದಲ್ಲಿ ನಾಲ್ವರು ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಘಟನೆ ನಡೆದ ತಕ್ಷಣವೇ ಬಸ್ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.

ಘಟನೆಯಲ್ಲಿ ರಸ್ತೆಯ ಡಿವೈಡರ್‌ಗೆ ಹಾನಿಯಾಗಿದೆ. ಅಲ್ಲದೆ, ವಿದ್ಯುತ್ ಕಂಬವು ಮುರಿದು ಬಿದ್ದಿದ್ದು, ಸಂಪೂರ್ಣ ಜಖಂಗೊಂಡಿದೆ. ಬಸ್‌ನ ಅತಿಯಾದ ವೇಗವೇ ಅವಘಾತಕ್ಕೆ ಕಾರಣ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಈ ಕುರಿತು ಮಂಗಳೂರು ಸಂಚಾರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News