ಲೈಂಗಿಕ ದೌರ್ಜನ್ಯವೆಸಗಿದ್ದ ವ್ಯಕ್ತಿಗೆ ಜಾಮೀನು: ಸುಪ್ರೀಂ ಮೆಟ್ಟಿಲೇರಲು ಮುಂದಾದ ವಿದೇಶಿ ಮಹಿಳೆ

Update: 2019-08-04 14:15 GMT

ಹೊಸದಿಲ್ಲಿ,ಆ.4: ದಿಲ್ಲಿಯಲ್ಲಿ 2013ರಲ್ಲಿ ತನ್ನ ಮೇಲೆ ಲೈಂಗಿಕ ದೌರ್ಜನ್ಯವನ್ನು ಎಸಗಿದ್ದ ಆರೋಪಿಗೆ ಜಾಮೀನು ನೀಡಿರುವುದನ್ನು ಖಂಡಿಸಿ ಅಮೆರಿಕದ ಮಹಿಳೆಯೋರ್ವರು ಫೇಸ್‌ಬುಕ್‌ನಲ್ಲಿ ವೀಡಿಯೊವೊಂದನ್ನು ಪೋಸ್ಟ್ ಮಾಡಿದ್ದಾರೆ.

ಜಾಮೀನು ನೀಡಿಕೆಯ ವಿರುದ್ಧ ತಾನು ಉಚ್ಚ ನ್ಯಾಯಾಲಯ ಮಾತ್ರ ಅಲ್ಲ,ಭಾರತದ ಸರ್ವೋಚ್ಚ ನ್ಯಾಯಾಲಯದಲ್ಲಿಯೂ ಕಾನೂನು ಸಮರ ನಡೆಸುವುದಾಗಿ ಅವರು ಪಣ ತೊಟ್ಟಿದ್ದಾರೆ. ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸ ಕಚೇರಿಯ ಹೊರಗೆ ಈ ವೀಡಿಯೊವನ್ನು ಅವರು ಚಿತ್ರೀಕರಿಸಿದ್ದಾರೆ.

 ಈ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ್ದ ರಾಜ್ ಪನ್ವರ್ ಎಂಬಾತನನ್ನು ದೋಷಿಯೆಂದು ಕಳೆದ ಫೆಬ್ರುವರಿಯಲ್ಲಿ ಘೋಷಿಸಿದ್ದ ದಿಲ್ಲಿಯ ವಿಚಾರಣಾ ನ್ಯಾಯಾಲಯವು ಏಳು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿತ್ತು. ಆತನಿಗೆ ಐದು ಲ.ರೂ.ಗಳ ದಂಡವನ್ನೂ ವಿಧಿಸಿದ್ದ ಅದು,ಈ ಮೊತ್ತವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ನಿರ್ದೇಶಿಸಿತ್ತು. ಆದರೆ ಜು.5ರಂದು ದಿಲ್ಲಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶ ಚಂದ್ರಶೇಖರ್ ಅವರು ಪನ್ವರ್‌ಗೆ ಜಾಮೀನು ಮಂಜೂರು ಮಾಡಿದ್ದರು.

ಆರೋಪಿಗೆ ಶಿಕ್ಷೆಯಾಗುವಂತೆ ಮಾಡಲು ತಾನು ದೀರ್ಘ ಹೋರಾಟ ನಡೆಸಿದ್ದೆ. ಹೇಳಿಕೆಯನ್ನು ನೀಡಲು ಭಾರತಕ್ಕೆ ತೆರಳಿ ನ್ಯಾಯಾಲಯಕ್ಕೂ ಹಾಜರಾಗಿದ್ದೆ. ಇದಕ್ಕಾಗಿ ಸ್ವಂತ ಹಣವನ್ನು ವ್ಯಯಿಸಿದ್ದೆ. ಈಗ ಆರೋಪಿಗೆ ಜಾಮೀನು ದೊರಕಿರುವ ಮಾಹಿತಿ ತನಗೆ ಲಭಿಸಿದೆ ಎಂದಿರುವ ಮಹಿಳೆ,ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ದೂತಾವಾಸದ ಅಧಿಕಾರಿಗಳು ತನಗೆ ನೆರವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಕೆಲವು ಫಾರ್ಮ್‌ಗಳಿಗೆ ಸ್ಯಾನ್ ಫ್ರಾನ್ಸಿಸ್ಕೊ ಮತ್ತು ಕ್ಯಾಲಿಫೋರ್ನಿಯಾಗಳಲ್ಲಿಯ ನೋಟರಿಯ ದೃಢೀಕರಣ ಬೇಕೆಂದು ಅವರು ಹೇಳುತ್ತಿದ್ದಾರೆ. ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ವ್ಯಕ್ತಿಯನ್ನು ನ್ಯಾಯಾಲಯವು ಜಾಮೀನು ಬಿಡುಗಡೆಗೊಳಿಸಿದೆ ಎಂಬ ಕಾರಣಕ್ಕಾಗಿ ತಾನೀಗ ಇದಕ್ಕಾಗಿ ಸಾವಿರಾರು ಡಾಲರ್‌ಗಳನ್ನು ವ್ಯಯಿಸಬೇಕಿದೆ ಎಂದು ದೂರಿಕೊಂಡಿರುವ ಅವರು,ಭಾರತದಲ್ಲಿ ವಿಪರೀತ ಭ್ರಷ್ಟಾಚಾರ ಮತ್ತು ಹಲ್ಲೆಗೊಳಗಾದ ಮಹಿಳೆಯರಿಗೆ ಬೆಂಬಲದ ಕೊರತೆ ಈಗಲೂ ಮುಂದುವರಿದಿದೆ ಎಂದಿದ್ದಾರೆ. ತನ್ನ ಹೋರಾಟಕ್ಕೆ ಭಾರತೀಯರ ಬೆಂಬಲವನ್ನೂ ಅವರು ಕೋರಿದ್ದಾರೆ.

ಮಹಿಳೆಯ ಪೋಸ್ಟ್‌ಗೆ ಉತ್ತರಿಸಿರುವ ಭಾರತೀಯ ದೂತಾವಾಸವು,‘ನಿಮಗೆ ಎಲ್ಲ ಸಹಕಾರವನ್ನೂ ಅಧಿಕಾರಿಗಳು ನೀಡಿದ್ದಾರೆ. ನಿಮ್ಮ ಬಗ್ಗೆ ನಮಗೆ ಸಹಾನುಭೂತಿಯಿದೆ ಮತ್ತು ನಮ್ಮ ಬೆಂಬಲ ನಿಮಗಿದೆ. ನಿಮಗೆ ಸಿಗಲೇಬೇಕಾದ ನ್ಯಾಯವನ್ನು ನೀವು ಶೀಘ್ರವೇ ಪಡೆಯುತ್ತೀರಿ ಎಂದು ಆಶಿಸಿದ್ದೇವೆ ’ಎಂದು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News