ಆಧುನಿಕತೆ ಹೆಸರಿನಲ್ಲಿ ಬಹುಸಂಸ್ಕೃತಿ ನಾಶ: ಡಾ.ಡಿ.ಬಿ.ನಾಯಕ್

Update: 2019-08-04 14:32 GMT

ಉಡುಪಿ, ಆ.4: ಜಾನಪದ ಎಂಬುದು ಬಹುಸಂಸ್ಕೃತಿ, ಬಹುಭಾಷೆಯ ನೆಲೆ ಆಗಿದೆ. ಆದರೆ ಇಂದು ಆಧುನಿಕತೆ ಹೆಸರಿನಲ್ಲಿ ಬಹುಸಂಸ್ಕೃತಿಯನ್ನು ನಾಶ ಮಾಡಿ ನಾವು ಏಕ ಸಂಸ್ಕೃತಿಯ ಕಡೆಗೆ ಹೋಗುತ್ತಿದ್ದೇವೆ. ವಿವಿಧತೆಯಲ್ಲಿ ಏಕತೆಯನ್ನು ಹೊಸತನದ ಹೆಸರಿನಲ್ಲಿ ಕಳೆದುಕೊಳ್ಳುತ್ತಿದ್ದೇವೆ ಎಂದು ಹಾವೇರಿ ಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಡಿ.ಬಿ. ನಾಯಕ್ ಹೇಳಿದ್ದಾರೆ.

ಉಡುಪಿ ಪ್ರಾಚ್ಯ ಸಂಚಯ ಸಂಶೋಧನ ಕೇಂದ್ರದ ಆಶ್ರಯದಲ್ಲಿ ಪಚ್ಚೆವನ ಭಾರತ ದರ್ಶನ, ಜೈವಿಕ ಪರಿಸರ ಅಧ್ಯಯನ ಮಹಾ ಒಕ್ಕೂಟ, ಗ್ರೀನ್ ಇಂಡಿಯಾ ವಿಷನ್ ಇಕೋಲಾಜಿಕಲ್ ಸ್ಟಡೀಸ್ ಗೀವ್ಸ್ ಒನ್ ಟು ಒನ್ ಗ್ರೇಟ್ ಟೀಮ್ ಹಾಗೂ ಉಡುಪಿ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಕೇಂದ್ರದ ಇತಿಹಾಸ ವಿಭಾಗದ ಸಹಯೋಗದೊಂದಿಗೆ ರವಿವಾರ ಕಾಲೇಜಿನ ಮಿನಿ ಹಾಲ್‌ನಲ್ಲಿ ಆಯೋಜಿಸಲಾದ ಹಸಿರು ಕಲ್ಯಾಣದತ್ತ ನಮ್ಮ ನಡೆ, ಪಚ್ಚೆವನಸಿರಿ ಅಭಿಯಾನವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಜಾನಪದ ಎಂಬುದು ಕೇವಲ ಹಾಡು, ಕುಣಿತ ಮಾತ್ರವಲ್ಲದೆ ಪರಿಸರ, ಕೃಷಿ, ಆರೋಗ್ಯ, ಕಲೆಯ ಜ್ಞಾನಗಳ ಮೂಲ ಸೇರಿದಂತೆ ಎಲ್ಲವನ್ನು ಒಳ ಗೊಂಡಿದೆ. ಬದಲಾವಣೆ ಜೊತೆಗೆ ಪರಂಪರೆಯ ಜ್ಞಾನವನ್ನು ವೈಜ್ಞಾನಿಕ ನೆಲೆ ಯಲ್ಲಿ ಬಳಸಿಕೊಳ್ಳುವುದು ಇಂದಿನ ಅನಿವಾರ್ಯವಾಗಿದೆ. ಪರಂಪರೆಯ ಜ್ಞಾನದ ಅರಿವು ಇಲ್ಲದೆ ಬದುಕು ಕಟ್ಟಿಕೊಳ್ಳಲು ಸಾಧ್ಯವಿಲ್ಲ ಎಂದರು.

ಪರಂಪರೆಯಲ್ಲಿರುವ ಮೌಢ್ಯಗಳನ್ನು ಬಿಟ್ಟು ವೈಜ್ಞಾನಿಕ ಅಂಶಗಳನ್ನು ಉಳಿಸಿಕೊಳ್ಳಬೇಕು. ಪರಂಪರೆ ಇಲ್ಲದೆ ನಮಗೆ ಬದುಕು ಇಲ್ಲ. ಪರಂಪರೆಯ ಜ್ಞಾನವನ್ನು ಉಳಿಸಿ, ಹೊಸತನವನ್ನು ಸೇರಿಸಿದರೆ ನಮ್ಮ ಬದುಕು ಅರ್ಥಪೂರ್ಣ ಆಗಲು ಸಾಧ್ಯ ಎಂದು ಅವರು ಅಭಿಪ್ರಾಯ ಪಟ್ಟರು.

 ಜನಪದರು ಉಳಿಸಿದ ನಿಸರ್ಗವನ್ನು ನಾವು ಆಧುನಿಕತೆ, ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡುತ್ತಿದ್ದೇವೆ. ಇದರ ಪರಿಣಾಮವಾಗಿ ಎಲ್ಲ ಕಡೆ ಪ್ರಾಕೃತಿಕ ವಿಕೋಪ ಗಳು ಸಂಭವಿಸುತ್ತಿವೆ. ನಿಸರ್ಗವನ್ನು ನಾವು ನಾಶ ಮಾಡಿದರೆ, ನಮ್ಮನ್ನು ನಿಸರ್ಗ ನಾಶ ಮಾಡುತ್ತದೆ. ಆದುದರಿಂದ ನಿಸರ್ಗದ ಜೊತೆ ಹೋದಾಗ ಮಾತ್ರ ನಮ್ಮ ಬದುಕು ಮತ್ತು ಸಂಸ್ಕೃತಿ ಉಳಿಯಲು ಸಾಧ್ಯವಾಗುತ್ತದೆ ಎಂದು ಅವರು ತಿಳಿಸಿದರು.

ಅಧ್ಯಕ್ಷತೆಯನ್ನು ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್‌ನ ಆಡಳಿತಾಧಿಕಾರಿ ಡಾ.ಎಚ್.ಶಾಂತಾರಾಮ್ ವಹಿಸಿದ್ದರು. ಜಾನಪದ ವಿವಿಯ ವೌಲ್ಯ ಮಾಪನ ಕುಲ ಸಚಿವ ಡಾ.ಎಂ.ಎನ್.ವೆಂಕಟೇಶ್ ಶಿಖರೋಪನ್ಯಾಸ ನೀಡಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಘವೇಂದ್ರ ಎ., ಕರ್ನಾಟಕ ಜಾನಪದ ಪರಿಷತ್‌ನ ಜಿಲ್ಲಾಧ್ಯಕ್ಷ ತಲ್ಲೂರು ಶಿವರಾಮ ಶೆಟ್ಟಿ, ಕೇಂದ್ರದ ಗೌರವಾಧ್ಯಕ್ಷ ಪ್ರೊ.ಯು.ಸಿ.ನಿರಂಜನ್ ಉಪಸ್ಥಿತರಿದ್ದರು.

ಕೇಂದ್ರದ ನಿರ್ದೇಶಕ ಪ್ರೊ.ಎಸ್.ಎ.ಕೃಷ್ಣಯ್ಯ ಪ್ರಾಸ್ತಾವಿಕವಾಗಿ ಮಾತನಾಡಿ ದರು. ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ. ಚಂದ್ರ ಕಾಂತ್ ಭಟ್ ಸ್ವಾಗತಿಸಿದರು. ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಉಪನ್ಯಾಸಕ ಪ್ರೊ.ಯಾದವ್ ಸಸಿಹಿತ್ಲು ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News