ಉಡುಪಿ: ಶ್ರಾವಣ ಮಾಸದ ಸಂಭ್ರಮದ ಚೂಡಿ ಪೂಜೆ

Update: 2019-08-04 14:39 GMT

ಉಡುಪಿ, ಆ.4: ಜಿಎಸ್‌ಬಿ ಸಮಾಜದ ಮಹಿಳೆಯರು ಶ್ರಾವಣ ಮಾಸದ ಚೂಡಿ ಪೂಜೆಯನ್ನು ತೆಂಕನಿಡಿಯೂರಿನ ಪ್ರಕಾಶ್ ಕಾಮತ್‌ರ ಮನೆಯಲ್ಲಿ ಸಂಭ್ರಮ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಿದರು.

ಮುತ್ತೈದೆಯರೆಲ್ಲ ಸೇರಿ ಶ್ರಾವಣ ಮಾಸದಲ್ಲಿ ಪ್ರಕೃತಿಯಲ್ಲಿ ಸಿಗುವ ವಿವಿಧ ಬಗೆಯ ಪುಷ್ಪಗಳಾದ ರಥಪುಷ್ಪ, ಗರಿಕೆ, ಶಂಖಪುಷ್ಪ, ರತ್ನಗಂಧಿ, ಸುಗಂಧ ರಾಜ, ಆರತಿ, ಅನ್ವಾಲಿ, ಕಣಗಿಲೆ, ಕರವೀರ, ಗೌರಿ ಹೂ, ಸಣ್ಣಗುಲಾಬಿಗಳನ್ನು ಬಾಳೆ ನಾರಿನಿಂದ ಕಟ್ಟಿ ಚೂಡಿಯನ್ನು ತಯಾರಿಸಿ ತುಳಸಿ ಕಟ್ಟೆಗೆ ಸಮರ್ಪಿಸಿ ನೀರೆರೆದರು. ದೇವರ ಸಂಕೀರ್ತನೆ ಪಠಿಸುತ್ತ ಪೂಜೆ ಮಾಡಿ, ನಂತರ ಹೊಸ್ತಿಲಲ್ಲಿ ಇಟ್ಟು ಪೂಜೆ ಮಾಡಿ ದೇವರಿಗೆ ಸಮರ್ಪಿಸಿದರು.
ಜಿಎಸ್‌ಬಿ ಮುತ್ತೈದೆಯರು ಶ್ರಾವಣ ಮಾಸದ ಪ್ರತಿ ಶುಕ್ರವಾರ ಮತ್ತು ಆದಿತ್ಯವಾರ ಈ ಪೂಜೆಯನ್ನು ತಮ್ಮ ತಮ್ಮ ಮನೆಗಳಲ್ಲಿ ನೆರವೇರಿಸುತ್ತಾರೆ. ಚೂಡಿ ಪೂಜೆ ಎಂಬುದು ಪ್ರಕೃತಿಯ ಪೂಜೆ ಎಂದು ಪರಿಗಣಿಸಿ ತುಳಸಿ ಮಾತೆಗೆ ಮತ್ತು ಸೂರ್ಯ ದೇವರಿಗೆ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ಇದು ಪ್ರಕೃತಿಯ ಆರಾಧನೆಯ ಪ್ರತೀಕ ಎಂದು ಯೋಗಿನಿ ಕಾಮತ್ ತಿಳಿಸಿದರು.
‘ಮದುವೆಯಾದ ಮೊದಲ ವರ್ಷದ ವಧುವಿಗೆ ಅತ್ತೆಮನೆ, ತವರುಮನೆ ಎರಡೂ ಕಡೆ ಚೂಡಿ ಪೂಜೆ ಮಾಡುವ ಸೌಭಾಗ್ಯ ದೊರೆಯುತ್ತದೆ. ನವ ವಧು ಪೂಜಿಸಿದ ಚೂಡಿಯನ್ನು ಪತಿಗೆ ನೀಡಿ, ಪತಿಯ ಆಶೀರ್ವಾದ ಹಾಗು ಉಡುಗೊರೆಯನ್ನು ಪಡೆಯಲಾಗುತ್ತದೆ. ಎಲ್ಲರೊಂದಿಗೆ ಇಂದು ನಾನು ನನ್ನ ಮೊದಲ ಚೂಡಿಪೂಜೆ ಮಾಡಿದ್ದೆೀನೆ ಎಂದರು ನವವಧು ಸಾಕ್ಷಿ ಮಲ್ಯ
ಈ ಸಂದರ್ಭದಲ್ಲಿ ಕೃಪಾ ಮಲ್ಯ ಹೊನ್ನಾವರ, ಪವಿತ್ರ ಕಾಮತ, ಸಾಕ್ಷಿ ಮಲ್ಯ, ಕೃಪಾ ಮಲ್ಯ, ಶ್ರೇಯಸ್ ಮಲ್ಯ, ಸುಧೀರ್ ಮಲ್ಯ, ರಾಧಿಕಾ ನಾಯಕ್, ಯೋಗಿನಿ ಕಾಮತ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News