ನೇತ್ರಾವತಿ ನದಿಗೆ ಹಾರಿದ ನಂತರ ನೆನಪಾದ ಪತ್ನಿ, ಮಗು: ಈಜಿ ದಡ ಸೇರಿದ ಯುವಕ
ಮಂಗಳೂರು, ಆ.4: ಉಳ್ಳಾಲ ಸೇತುವೆಯಿಂದ ರವಿವಾರ ಸಂಜೆ ನದಿಗೆ ಹಾರಿದ ವ್ಯಕ್ತಿಯೊಬ್ಬರು ಕೊನೆಕ್ಷಣದಲ್ಲಿ ತನ್ನ ನಿರ್ಧಾರ ಬದಲಿಸಿ ದಡದತ್ತ ಈಜಿಕೊಂಡು ಬಂದಿದ್ದು, ಸ್ಥಳೀಯರು ಕೂಡಲೇ ಅವರನ್ನು ರಕ್ಷಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ನಿವಾಸಿ ಗಿರೀಶ್ (32) ನದಿಗೆ ಹಾರಿದವರು. ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಗಿರೀಶ್ ನಗರದ ಉರ್ವ ಸ್ಟೋರ್‌ನಲ್ಲಿ ಸೀಯಾಳ ವ್ಯಾಪಾರ ಮಾಡುತ್ತಿದ್ದು, ಅವರ ಪತ್ನಿ ನಗರದ ಕೋರ್ಟ್‌ನಲ್ಲಿ ಉದ್ಯೋಗಿಯಾಗಿದ್ದಾರೆ. ಗಿರೀಶ್ ಪತ್ನಿ, ಮಗುವಿನೊಂದಿಗೆ ಉರ್ವ ಪಿಡಬ್ಲ್ಯುಡಿ ಕ್ವಾಟ್ರರ್ಸ್‌ನಲ್ಲಿ ವಾಸಿಸುತ್ತಿದ್ದರು. ರವಿವಾರ ಸಂಜೆ ನಗರದಿಂದ ಉಳ್ಳಾಲ ಕಡೆಗೆ ತೆರಳಿದ ಗಿರೀಶ್ ಸೇತುವೆಯಿಂದ ನೇತ್ರಾವತಿ ನದಿ ನೀರಿಗೆ ಹಾರಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆದರೆ, ನೀರಿಗೆ ಜಿಗಿದ ಬಳಿಕ ಪತ್ನಿ, ಮಗುವಿನ ನೆನಪಾಗಿ ಈಜಿ ದಡ ಸೇರುವೆ ಪ್ರಯತ್ನ ಮಾಡಿದ್ದಾರೆ. ಗಿರೀಶ್ ನದಿಗೆ ಹಾರಿದ್ದನ್ನು ತೊಕ್ಕೊಟ್ಟು ಕಡೆಯಿಂದ ಬರುವವರು ನೋಡಿದ್ದು, ವಾಹನ ನಿಲ್ಲಿಸಿ ನದಿಯತ್ತ ನೋಡಿದ್ದಾರೆ. ಈ ಸಂದರ್ಭ ಗಿರೀಶ್ ನೀರಿನಲ್ಲಿ ಈಜಿಕೊಂಡು ದಡದತ್ತ ಬರುವುದನ್ನು ಗಮನಿಸಿ ಕೂಡಲೇ ರಕ್ಷಣೆ ಮಾಡಿದ್ದಾರೆ. ಬಳಿಕ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
ಪೊಲೀಸ್ ಗಸ್ತು: ಕಾಫಿ ಡೇ ಸಂಸ್ಥಾಪಕ, ಉದ್ಯಮಿ ಜು.29ರಂದು ಸಂಜೆ ಇದೇ ನೇತ್ರಾವತಿ ಸೇತುವೆಯಿಂದ ಕಣ್ಮರೆಯಾಗಿದ್ದರು. ಅದೇ ಜಾಗದಲ್ಲಿ ರವಿವಾರ ಸಂಜೆ ಗಿರೀಶ್ ಜಿಗಿದಿದ್ದಾರೆ. ಮುಂಜಾಗ್ರತಾ ಕ್ರಮವಾಗಿ ನೇತ್ರಾವತಿ ನದಿ ಸೇತುವೆಯಲ್ಲಿ ಪೊಲೀಸರ ಗಸ್ತನ್ನು ನಿಯೋಜಿಸಲಾಗಿದೆ ಎಂದು ಮಂಗಳೂರು ಕಮಿಷನರೇಟ್‌ನ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ಲಕ್ಷ್ಮೀಗಣೇಶ್ ತಿಳಿಸಿದ್ದಾರೆ.
ಈ ಕುರಿತು ಕಂಕನಾಡಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.