ಜಮ್ಮು ಕಾಶ್ಮೀರದಲ್ಲಿ ಉಗ್ರ ದಾಳಿ ಬೆದರಿಕೆ ಇದೆ ಎಂದು ಕೇಂದ್ರ ಸುಳ್ಳು ಹೇಳುತ್ತಿದೆ: ದಿಗ್ವಿಜಯ ಸಿಂಗ್

Update: 2019-08-04 16:05 GMT

ಸೆಹೋರೆ, ಆ. 4: ಜಮ್ಮು ಹಾಗೂ ಕಾಶ್ಮೀರದ ಭಯೋತ್ಪಾದನೆಗೆ ಸಂಬಂಧಿಸಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಸುಳ್ಳು ಹೇಳುತ್ತಿದೆ. ಅಲ್ಲಿ ಕೆಲವು ಮಹತ್ತರ ಕ್ರಮಗಳನ್ನು ಕೈಗೊಳ್ಳಲು ಕೇಂದ್ರ ಸರಕಾರ ಯೋಜಿಸುತ್ತಿದೆ ಎಂದು ಕಾಂಗ್ರೆಸ್‌ನ ರಾಜ್ಯ ಸಭಾ ಸದಸ್ಯ ದಿಗ್ವಿಜಯ ಸಿಂಗ್ ಶನಿವಾರ ಹೇಳಿದ್ದಾರೆ.

 ‘‘ಅವರು ಕಾಶ್ಮೀರವನ್ನು ಬಯಸುತ್ತಾರೆ. ಆದರೆ, ಕಾಶ್ಮೀರಿಗಳನ್ನು ಅಲ್ಲ. ಇದು ಯಾಕೆ ಸಂಭವಿಸುತ್ತದೆ ? ಅವರು ಯುವ ಜನತೆಯ ಮನಸ್ಸಿನಲ್ಲಿ ಕೋಮುವಾದದ ವಿಷ ಬೀಜ ಬಿತ್ತುತ್ತಿದ್ದಾರೆ. ನನಗೆ ಈ ಸರಕಾರದ ಬಗ್ಗೆ ನಂಬಿಕೆ ಇಲ್ಲ. ಪ್ರತಿ ದಿನ ಭಯೋತ್ಪಾದನೆ ಘಟನೆಗಳು ನಡೆಯುತ್ತಿವೆ. ಆದರೂ ಅವರು ಅಮರನಾಥ ಯಾತ್ರೆ ಸ್ಥಗಿತಗೊಳಿಸಿರುವುದು ಯಾಕೆ?. ಅಲ್ಲಿ ಏನಾದರೂ ಸಂಭವಿಸಲಿದೆಯೇ?’’ ಎಂದು ಸಿಂಗ್ ಪ್ರಶ್ನಿಸಿದ್ದಾರೆ.

‘‘ಸುಮಾರು 20 ಸಾವಿರಕ್ಕೂ ಅಧಿಕ ಪಡೆಯನ್ನು ಅಲ್ಲಿಗೆ ಕಳುಹಿಸಲಾಗಿದೆ. ಇದು ಅಲ್ಲಿ ಮಹತ್ತರ ಕ್ರಮ ಕೈಗೊಳ್ಳುವ ಸೂಚನೆಯಂತೆ ಕಾಣುತ್ತದೆ. ಕಾಶ್ಮೀರ ಕಣಿವೆಯಲ್ಲಿ ಏನು ಮಾಡುವುದಿದ್ದರೂ ಬಿಜೆಪಿ ಚಿಂತಿಸಬೇಕು. ಯಾಕೆಂದರೆ, ಅದು ಅತಿ ಸೂಕ್ಷ್ಮ ಪ್ರದೇಶ. ಅವರು ಅತಿ ಮಹತ್ತರ ಕ್ರಮ ಕೈಗೊಳ್ಳುವ ಚಿಂತನೆಯಲ್ಲಿ ಇದ್ದಾರೆ. ಅಲ್ಲಿ ಭಯೋತ್ಪಾದಕರ ಬೆದರಿಕೆ ಇದೆ ಎಂದು ಅವರು ಸುಳ್ಳು ಹೇಳುತ್ತಿದ್ದಾರೆ’’ ಎಂದು ಅವರು ಹೇಳಿದ್ದಾರೆ.

ಯಾತ್ರಾರ್ಥಿಗಳ ಮೇಲೆ ದಾಳಿ ನಡೆಸಲು ಪಾಕಿಸ್ತಾನದ ಭಯೋತ್ಪಾದಕರು ಯೋಜಿಸುತ್ತಿದ್ದಾರೆ ಎಂದು ಭಾರತೀಯ ಸೇನೆ ಮುನ್ನೆಚ್ಚರಿಕೆ ನೀಡಿದ ಕೂಡಲೆ ಜಮ್ಮು ಕಾಶ್ಮೀರದಿಂದ ಹಿಂದಿರುಗುವಂತೆ ಅಮರನಾಥ ಯಾತ್ರಿಗಳು ಹಾಗೂ ಪ್ರವಾಸಿಗರಿಗೆ ಜಮ್ಮು ಹಾಗೂ ಕಾಶ್ಮೀರ ಸರಕಾರ ಶುಕ್ರವಾರ ಸಲಹೆ ನೀಡಿತ್ತು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News