ಸಂಸ್ಥೆ ಕಟ್ಟಲು ಶ್ರಮಜೀವಿ, ಛಲವಂತ ಕನಸುಗಾರ ಬೇಕು: ಎಚ್.ಕೆ.ಪಾಟೀಲ್

Update: 2019-08-04 15:45 GMT

ಮಣಿಪಾಲ, ಆ.4: ಯಾವುದೇ ಸಂಸ್ಥೆಯೊಂದನ್ನು ಯಶಸ್ವಿಯಾಗಿ ಕಟ್ಟಿ ಬೆಳಸಲು ಶ್ರಮಜೀವಿ ಹಾಗೂ ಛಲವಂತನಾದ ಕನಸುಗಾರನೊಬ್ಬ ಬೇಕು. ಆತನಿಗೆ ಪ್ರಾಮಾಣಿಕ ಹಾಗೂ ದಕ್ಷವಾದ ತಂಡವೊಂದು ಬೆನ್ನಿಗಿರಬೇಕು. ಮಣಿಪಾಲದ ಪೈಗಳಿಗೆ ಇವೆಲ್ಲವೂ ಸಿಕ್ಕಿದೆ ಎಂದು ಮಾಜಿ ಸಚಿವ ಹಾಗೂ ಹಾಲಿ ಗದಗ ಶಾಸಕ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

ಮಣಿಪಾಲ ಕಸ್ತೂರ್‌ಬಾ ಆಸ್ಪತ್ರೆಯ ಯುರಾಲಜಿ ಹಾಗೂ ರೀನಲ್ ಟ್ರಾನ್ಸ್‌ಪ್ಲಾಂಟೇಷನ್ ವಿಭಾಗದ ವತಿಯಿಂದ ಪ್ರಾರಂಭಗೊಂಡ ಸುಧಾರಿತ ಯೂರೋಡೈನಾಮಿಕ್ ಪ್ರಯೋಗಾಲಯವನ್ನು ರವಿವಾರ ಮಣಿಪಾಲದ ಶಿರಡಿ ಸಾಯಿಬಾಬಾ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ದೇಶವು ಮಣಿಪಾಲದ ಬಗ್ಗೆ ಹೆಮ್ಮೆ ಪಡುತ್ತದೆ. ವಿಶ್ವದಲ್ಲಿ 500ರೊಳಗೆ ಸ್ಥಾನ ಪಡೆದಿರುವ ದೇಶದ ಏಕೈಕ ಖಾಸಗಿ ವಿಶ್ವವಿದ್ಯಾಲಯ ಮಾಹೆ ಆಗಿದೆ. ಶಿಕ್ಷಣ, ಆರೋಗ್ಯ ಮತ್ತು ಹಣಕಾಸು ಕ್ಷೇತ್ರದಲ್ಲಿ ಮಣಿಪಾಲ ಸಮೂಹ ಉತ್ತಮ ಹಾಗೂ ಮಾದರಿ ಸಂಸ್ಥೆಯಾಗಿ ಅಭಿವೃದ್ಧಿಹೊಂದಿದೆ. ಆರೋಗ್ಯ ಮತ್ತು ಗುಣಮಟ್ಟದ ಚಿಕಿತ್ಸೆಯಲ್ಲಿ ಮಣಿಪಾಲ ತನ್ನ ಶ್ರೇಷ್ಠತೆಗೆ ಹೆಸರುವಾಸಿಯಾಗಿದೆ ಎಂದರು.

ಮಾಹೆ ಕುಲಪತಿ ಡಾ. ಎಚ್. ವಿನೋದ್ ಭಟ್ ಮಾತನಾಡಿ ಪಾಟೀಲ್ ಕುಟುಂಬದಿಂದಾಗಿ ಉತ್ತರ ಕರ್ನಾಟಕದ ಗದಗ, ಬೇಟಗೇರಿ, ಹುಲಿಕೋಟೆ ಪ್ರದೇಶಗಳು ಶಿಕ್ಷಣ, ಆರೋಗ್ಯ ಮತ್ತು ಆರ್ಥಿಕ ಕ್ಷೇತ್ರಗಳಲ್ಲಿ ಭಾರೀ ಪ್ರಗತಿಯನ್ನು ಸಾಧಿಸಿದೆ ಎಂದರಲ್ಲದೇ, ಭವಿಷ್ಯದಲ್ಲಿ ಮಾಹೆಯನ್ನು ವಿಶ್ವ ಅಗ್ರ 200 ವಿವಿಗಳಲ್ಲಿ ಒಂದಾಗಿ ಮಾಡುವುು ನಮ್ಮ ಉದ್ದೇಶವಾಗಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್.ಎಸ್.ಬಲ್ಲಾಳ್, ಕೆಎಂಸಿಯ ಮೂತ್ರಶಾಸ್ತ್ರ ಮತ್ತು ಮೂತ್ರಪಿಂಡ ಕಸಿ ವಿಭಾಗ ದೇಶದಲ್ಲೇ ಅಗ್ರಗಣ್ಯ ವಿಭಾಗವಾಗಿದೆ. ಜೀವನಶೈಲಿ ಕಾಯಿಲೆಗಳಿಂದ ಪ್ರಭಾವಿತವಾಗುವ ಪ್ರಮುಖ ಅಂಗವಾದ ಮೂತ್ರಪಿಂಡ(ಕಿಡ್ನಿ)ಕ್ಕೆ ಸಂಬಂಧಪಟ್ಟ ಕಾಯಿಲೆ ಮತ್ತು ಚಿಕಿತ್ಸೆ ವಿಧಾನವನ್ನು ಯುರೋಡೈನಮಿಕ್ ಪ್ರಯೋಗಾಲಯದ ಸಹಾಯದಿಂದ ಕಂಡುಕೊಳ್ಳಬಹುದು ಎಂದು ಹೇಳಿದರು.

ಮಾಹೆಯ ಪ್ರೊ ವೈಸ್‌ಚಾನ್ಸಲರ್ ಡಾ. ಪೂರ್ಣಿಮಾ ಬಿ.ಬಾಳಿಗಾ ಯುರೋ ಡೈನಾಮಿಕ್ಸ್‌ನ ಪ್ರಮಾಣಿತ ಕಾರ್ಯ ವಿಧಾನ ಸೂಚಿ ಬಿಡುಗಡೆ ಗೊಳಿಸಿದರು.

ಕೆಎಂಸಿಯ ಡೀನ್ ಡಾ. ಶರತ್ ಕೆ. ರಾವ್ ಅತಿಥಿಗಳನ್ನು ಸ್ವಾಗತಿಸಿದರೆ, ಕೆಎಂಸಿ ಯುರಾಲಜಿ ವಿಭಾಗ ಮುಖ್ಯಸ್ಥ ಡಾ.ಅರುಣ್ ಚಾವ್ಲ ಪ್ರಾಸ್ತಾವಿಕ ವಾಗಿ ಮಾತನಾಡಿದರು. ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಅವಿನಾಶ ಶೆಟ್ಟಿ ವಂದಿಸಿದರು. ಡಾ.ಅಕ್ಷಯ್ ಕೃಪಲಾನಿ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News