ಉಡುಪಿ: ಮಲೇರಿಯಾ, ಡೆಂಗ್ ರೋಗದ ನಿಯಂತ್ರಣಕ್ಕೆ ಸಭೆ
ಉಡುಪಿ, ಆ.4: ಜಿಲ್ಲೆಯ ಮಲ್ಪೆ ಮತ್ತು ನಗರಸಭಾ ವ್ಯಾಪ್ತಿಯಲ್ಲಿ ಡೆಂಗ್ ಮತ್ತು ಮಲೇರಿಯಾ ಕಾಯಿಲೆಗಳನ್ನು ಸಮರ್ಪಕವಾಗಿ ನಿಯಂತ್ರಿಸುವ ಕುರಿತು ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಚ್. ಅಶೋಕ ಇವರ ಅಧ್ಯಕ್ಷತೆಯಲ್ಲಿ ಆರೋಗ್ಯ ಇಲಾಖೆ, ನಗರಸಭೆ ಮತ್ತು ಮೀನುಗಾರಿಕಾ ಇಲಾಖೆಗಳ ಅಧಿಕಾರಿಗಳು ಹಾಗೂ ಮೇಲ್ವಿಚಾರಕ ಸಿಬ್ಬಂದಿಗಳ ವಿಶೇಷ ಸಭೆ ಇತ್ತೀಚೆಗೆ ಇಲ್ಲಿ ನಡೆಯಿತು.
ನಗರ ಪ್ರದೇಶಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಗಳಲ್ಲಿ ಮಲೇರಿಯಾ ಹರಡದಂತೆ ಸಿವಿಕ್‌ಬೈಲಾ ಅನುಷ್ಠಾನಗೊಳಿಸಬೇಕು. ವಲಸೆ ಕಾರ್ಮಿಕರ ಚಲನವಲನಗಳ ಬಗ್ಗೆ ದಾಖಲೆ ನಿರ್ವಹಿಸಿ, ಅವರನ್ನು ಮಲೇರಿಯಾ ಪರೀಕ್ಷೆ ಗೊಳಪಡಿಸಬೇಕು. ಅಲ್ಲದೇ ಕಟ್ಟಡ ನಿರ್ಮಾಣ ಪ್ರದೇಶದಲ್ಲಿ ಸೊಳ್ಳೆ ಉತ್ಪತ್ತಿ ಯಾಗದಂತೆ ಕಟ್ಟಡದ ಮಾಲೀಕರೇ ನಿಯಂತ್ರಣ ಮಾಡಬೇಕು. ಪರಿಸರದಲ್ಲಿ ಸ್ವಚ್ಛತೆ ಕಾಪಾಡುವ ಮತ್ತು ಮಲ್ಪೆಬಂದರಿನಲ್ಲಿ ಬೋಟ್‌ಗಳಲ್ಲಿರುವ ಟಯರ್‌ಗಳು ಮತ್ತು ಸಿಂಟೆಕ್ಸ್ ಟ್ಯಾಂಕ್‌ಗಳಲ್ಲಿ ನೀರು ನಿಂತು ಸೊಳ್ಳೆ ಉತ್ಪತ್ತಿ ಯಾಗದಂತೆ ಅವುಗಳನ್ನು ಸ್ವಚ್ಛಗೊಳಿಸಬೇಕು.ಅಲ್ಲದೇ ಒಣಮೀನು ಸಂಗ್ರಹಣಾ ತೊಟ್ಟಿಗಳಲ್ಲಿ ನೀರು ನಿಲ್ಲದಂತೆ ಕ್ರಮ ವಹಿಸುವ ವಿಚಾರಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಲಾಯಿತು.
ಸಭೆಯಲ್ಲಿ ನಗರಸಭಾ ಪೌರಾಯುಕ್ತ ಆನಂದ ಕಲ್ಲೋಳ್ಕರ, ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಗಣೇಶ್ ಮತ್ತು ಸಹಾಯಕ ನಿರ್ದೇಶಕ ಶಿವ ಕುಮಾರ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ. ಪ್ರಶಾಂತ ಭಟ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಾಸುದೇವ, ಜಿಲ್ಲಾ ಕ್ಷಯ ರೋಗ ನಿಯಂತ್ರಣಾಧಿಕಾರಿ ಡಾ. ಚಿದಾನಂದ ಸಂಜು, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಮರಾವ್ ಮತ್ತು ಜಿಲ್ಲಾ ಆರ್‌ಸಿಹೆಚ್ ಅಧಿಕಾರಿ ಡಾ.ರಾಮ ಎಂ.ಜಿ. ಉಪಸ್ಥಿತರಿದ್ದರು.
ಜಿಲ್ಲಾ ಎಂಟಾಮೊಲಜಿಸ್ಟ್ ಮುಕ್ತಾ, ಜಿಲ್ಲಾ ಮೈಕ್ರೋಬಯೋಲಾಜಿಸ್ಟ್ ಸುಮಾ ಹೆಗ್ಡೆ, ಎಪಿಡಮಾಲಜಿಸ್ಟ್ ಡಾ.ತೇಜಸ್ವಿನಿ, ಜಿಲ್ಲಾ ಆರೋಗ್ಯ ಮೇಲ್ವಿಚಾರಕ ಆನಂದ ಗೌಡ ಮತ್ತು ಕೆ. ಕೃಷ್ಣಪ್ಪ, ಆರೋಗ್ಯ ಇಲಾಖೆಯ ಮತ್ತು ನಗರಸಭೆಯ ಆರೋಗ್ಯ ನಿರೀಕ್ಷಕರಿಂದ ಅಭಿಪ್ರಾಯಗಳನ್ನು ಪಡೆದು, ನಿಯಂತ್ರಣ ಕ್ರಮಗಳ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಡಾ.ಪ್ರಶಾಂತ ಭಟ್ ಸ್ವಾಗತಿಸಿ, ವಂದಿಸಿದರು.