2 ದಿನ ಕಾದು ನೋಡಿ, ಯಾವುದೂ ರಹಸ್ಯವಾಗಿ ನಡೆಯುವುದಿಲ್ಲ: ಜಮ್ಮು ಕಾಶ್ಮೀರ ರಾಜ್ಯಪಾಲ

Update: 2019-08-04 16:02 GMT

ಹೊಸದಿಲ್ಲಿ,ಆ.4: ಜಮ್ಮು-ಕಾಶ್ಮೀರದಲ್ಲಿ ಏನಾಗಲಿದೆಯೋ ಅದು ರಹಸ್ಯವಾಗಿ ಆಗುವುದಿಲ್ಲ. ಅದು ಸಂಸತ್ತಿನ ಮುಂದೆ ಬರುತ್ತದೆ ಮತ್ತು ಅಲ್ಲಿ ಚರ್ಚೆಯಾಗಲಿದೆ ಎಂದು ಆ ರಾಜ್ಯದ ರಾಜ್ಯಪಾಲ ಸತ್ಯಪಾಲ ಮಲಿಕ್ ಅವರು ಹೇಳಿದ್ದಾರೆ.

ಸರಕಾರಿ ಉದ್ಯೋಗಗಳು ಮತ್ತು ಭೂಮಿಯಲ್ಲಿ ಜಮ್ಮು-ಕಾಶ್ಮೀರ ನಿವಾಸಿಗಳಿಗೆ ವಿಶೇಷ ಹಕ್ಕುಗಳನ್ನು ನೀಡಿರುವ ವಿಧಿ 35ಎ ಅನ್ನು ರದ್ದುಗೊಳಿಸಲಾಗುತ್ತಿದೆ ಎಂಬ ವದಂತಿಯು ಕಾವು ಪಡೆದುಕೊಳ್ಳುತ್ತಿರುವ ಸಮಯದಲ್ಲಿಯೇ ರಾಜ್ಯಪಾಲರ ಈ ಹೇಳಿಕೆಯು ಹೊರಬಿದ್ದಿರುವುದು ಕುತೂಹಲವನ್ನು ಕೆರಳಿಸಿದೆ.

ಸಂಸತ್ತಿನ ಅಧಿವೇಶನ ಜಾರಿಯಲ್ಲಿದೆ. ಇನ್ನೂ 3-4 ದಿನಗಳ ಕಾಲ ಅದು ಕಲಾಪಗಳನ್ನು ನಡೆಸಲಿದೆ. ಹೀಗಾಗಿ ಆಗುವುದೆಲ್ಲ ರಹಸ್ಯವಾಗಿ ಆಗುವುದಿಲ್ಲ. ಅದು ಸಂಸತ್ತಿನಲ್ಲಿ ಚರ್ಚೆಯಾಗಲಿದೆ, ಸೋಮವಾರ ಅಥವಾ ಮಂಗಳವಾರದವರೆಗೆ ಕಾದು ನೋಡಿ ಎಂದು ರವಿವಾರ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಮಲಿಕ್ ನುಡಿದರು.

ರಾಜ್ಯದಲ್ಲಿ ಯಾವುದೇ ಕ್ರಮವನ್ನು ತೆಗೆದುಕೊಳ್ಳುವ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಥವಾ ಗೃಹಸಚಿವ ಅಮಿತ್ ಶಾ ಅವರು ಯಾವುದೇ ಸುಳಿವನ್ನು ನೀಡಿಲ್ಲ. ಈವರೆಗೂ ತನಗೇನೂ ಮಾಹಿತಿಯಿಲ್ಲ. ದಿಲ್ಲಿಯಲ್ಲಿ ಪ್ರತಿಯೊಬ್ಬರೊಂದಿಗೂ ಮಾತನಾಡಿದ್ದೇನೆ,ಆದರೆ ಯಾರೂ ಸುಳಿವನ್ನು ನೀಡಿಲ್ಲ. ಕೆಲವರು ಮೂರು ಭಾಗಗಳಾಗಿ ರಾಜ್ಯದ ವಿಭಜನೆ,35ಎ,370 ಎಂದೆಲ್ಲ ಮಾತನಾಡುತ್ತಿದ್ದಾರೆ. ಆದರೆ ತನ್ನೊಂದಿಗೆ ಯಾರೂ ಚರ್ಚಿಸಿಲ್ಲ ಎಂದರು.

ರಾಜ್ಯಕ್ಕೆ ಸಂಬಂಧಿಸಿದಂತೆ ಯಾವುದೇ ಕಠಿಣ ಕ್ರಮವನ್ನು ತೆಗೆದುಕೊಳ್ಳಲು ಸರಕಾರವು ಉದ್ದೇಶಿಸಿಲ್ಲ ಎಂದ ಅವರು, ಕೆಲವು ರಾಜಕೀಯ ಪಕ್ಷಗಳು ಅನಗತ್ಯವಾಗಿ ಭೀತಿಯನ್ನು ಸೃಷ್ಟಿಸುತ್ತಿವೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News