‘ಕರ್ನಾಟಕದ ರೈತ ಚಳುವಳಿಗಳು’ ಪುಸ್ತಕ ಬಿಡುಗಡೆ
ಮಂಗಳೂರು, ಆ.4: ಹಿರಿಯ ಕಾರ್ಮಿಕ ಮುಖಂಡ ಕೆ.ಆರ್.ಶ್ರೀಯಾನ್ ರಚಿಸಿದ ‘ಕರ್ನಾಟಕದ ರೈತ ಚಳುವಳಿಗಳು’ ಪುಸ್ತಕ ಬಿಡುಗಡೆ ಕಾರ್ಯಕ್ರಮವು ರವಿವಾರ ನಗರದ ಸರಕಾರಿ ನೌಕರರ ಸಂಘದ ಜರುಗಿತು.
ಕರ್ನಾಟಕ ಪ್ರಾಂತ ರೈತ ಸಂಘದ ದ.ಕ.ಜಿಲ್ಲಾ ಸಮಿತಿ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಮಾಜಿ ಸಚಿವ ಬಿ.ರಮಾನಾಥ ರೈ ಕೃತಿ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು ಜನಸಾಮಾನ್ಯರ ಕಷ್ಟ ಕಾರ್ಪಣ್ಯವನ್ನು ಪರಿಹರಿಸುವಲ್ಲಿ ರೈತ ಚಳುವಳಿ ಬೀರಿದ ಪರಿಣಾಮವನ್ನು ಇಂದಿನ ಯುವ ಸಮುದಾಯಕ್ಕೆ ತಿಳಿಸಿಕೊಡುವ ಅಗತ್ಯವಿದೆ ಎಂದರು.
ಹಿಂದೆ ಸಾಮಾಜಿಕ ಬದಲಾವಣೆಯು ಸುಲಭವಾಗಿರಲಿಲ್ಲ. ಅನೇಕ ಹೋರಾಟಗಳು ನಡೆದ ಬಳಿಕ ಕಟ್ಟಕಡೆಯ ವ್ಯಕ್ತಿಗೂ ಸಾಮಾಜಿಕ ನ್ಯಾಯ ಸಿಗತೊಡಗಿದವು. ಭೂ ಸುಧಾರಣೆ ಕಾಯ್ದೆಯು ಕೆಳ ವರ್ಗದವರಿಗೆ ಪ್ರಯೋಜನವಾಗುವುದರ ಜತೆಗೆ ಜಿಲ್ಲೆಯ ಜನರು ಅಕ್ಷರ ಜ್ಞಾನಿಗಳಾಗಳು ಸಾಧ್ಯವಾಯಿತು. ಹೊಸ ಪೀಳಿಗೆಗೆ ಇದರ ಅರಿವಿಲ್ಲ. ಇದ್ದಿದ್ದರೆ ಜಿಲ್ಲೆಯ ಸಾಮಾಜಿಕ ಪರಿಸ್ಥಿತಿ ಇನ್ನೂ ಗಟ್ಟಿಯಾಗಿ ನೆಲೆಗೊಳ್ಳಲು ಸಾಧ್ಯವಾಗುತ್ತಿತ್ತು ಎಂದು ರಮಾನಾಥ ರೈ ಹೇಳಿದರು.
ಕೃತಿಯನ್ನು ಪರಿಚಯಿಸಿದ ಚಿಂತಕ ಜಿ.ರಾಜಶೇಖರ ಸ್ವಾತಂತ್ರಪೂರ್ವದಿಂದ ಇಲ್ಲಿಯವರೆಗಿನ ರೈತ ಚಳುವಳಿಯ ಸಮಗ್ರ ಚಿತ್ರಣ ಪುಸ್ತಕದಲ್ಲಿದೆ. ದ.ಕ., ಉತ್ತರ ಕನ್ನಡ, ಶಿವಮೊಗ್ಗ ಜಿಲ್ಲೆಯಲ್ಲಿ ನಡೆದ ಹೋರಾಟಗಳ ದಾಖಲೀಕರಣವೂ ಇದರಲ್ಲಾಗಿದೆ. ಟಿಪ್ಪು ಬಡ ರೈತರ, ಭೂಹಿಡುವಳಿದಾರರ ಸ್ನೇಹಿತ ಎನ್ನುವ ಮೂಲಕ ಸರಕಾರಕ್ಕೆ ಸಂದೇಶ ನೀಡಲಾಗಿದೆ. ಭೂಮಿಯನ್ನು ಜಮೀನುದಾರರಿಂದ ಬಿಡಿಸಿ ಸಣ್ಣ ಹಿಡುವಳಿದಾರರಿಗೆ ನೀಡಿರುವುದರಿಂದಲೇ ಆ ಪ್ರಾಂತದಲ್ಲಿ ಇಂದಿಗೂ ಜಮೀನುದಾರರು ಟಿಪ್ಪುವನ್ನು ದ್ವೇಷಿಸುತ್ತಾರೆ ಎಂದರು.
ಜಾಗತೀಕರಣದ ಪರಿಣಾಮ ಕುರಿತು ಪುಸ್ತಕದಲ್ಲಿ ವಿವರಿಸಲಾಗಿದೆ. ಅಂದರೆ ಉದಾರೀಕರಣ ಹಾಗೂ ಖಾಸಗೀಕರಣವು ಜಾಗತೀಕರಣದ ಕಣ್ಣುಗಳಿದ್ದಂತೆ. ಡಾ.ಮನಮೋಹನ್ ಸಿಂಗ್ ಅರ್ಥ ಸಚಿವರಾಗಿ, ನರಸಿಂಹರಾವ್ ಪ್ರಧಾನ ಮಂತ್ರಿಯಾಗಿದ್ದಾಗ ಆರಂಭವಾಗಿದ್ದ ಜಾಗತೀಕರಣದ ಪ್ರಕ್ರಿಯೆಗೆ ಮೋದಿ ವೇಗ ನೀಡಿದ್ದಾರೆ ಎಂದು ಜಿ.ರಾಜಶೇಖರ ನುಡಿದರು.
ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯದರ್ಶಿ ರವಿಕಿರಣ್ ಪುಣಚ, ವಕೀಲ ಯಶವಂತ ಮರೋಳಿ, ದ.ಕ.ಜಿಲ್ಲಾ ಸಮಿತಿಯ ಅಧ್ಯಕ್ಷ ಕೆ.ಕೃಷ್ಣಪ್ಪ ಸಾಲ್ಯಾನ್, ಲೇಖಕ ಕೆ.ಆರ್.ಶ್ರೀಯಾನ್ ಉಪಸ್ಥಿತರಿದ್ದರು.
ಸಮಿತಿ ಜಿಲ್ಲಾ ಕಾರ್ಯದರ್ಶಿ ಯಾದವ ಶೆಟ್ಟ ಸ್ವಾಗತಿಸಿದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿದರು.