ಶಾಸಕ ವೇದವ್ಯಾಸ ಕಾಮತ್ ಮನೆಯಿಂದ ಡೆಂಗ್ ಡ್ರೈವ್ ಅಭಿಯಾನಕ್ಕೆ ಚಾಲನೆ
ಮಂಗಳೂರು, ಆ.4: ಡೆಂಗ್ ನಿಯಂತ್ರಣದ ಹಿನ್ನೆಲೆಯಲ್ಲಿ ಎರಡನೇ ವಾರದ ಡೆಂಗ್ ಡ್ರೈವ್ ಅಭಿಯಾನಕ್ಕೆ ಲೇಡಿಹಿಲ್ ಗಾಂಧಿನಗರ 7ನೇ ಕ್ರಾಸ್‌ನಲ್ಲಿರುವ ಶಾಸಕ ವೇದವ್ಯಾಸ ಕಾಮತ್‌ರ ಮನೆಯಿಂದ ಚಾಲನೆ ನೀಡಲಾಯಿತು.
ಬಳಿಕ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಡೆಂಗ್ ಲಾರ್ವ ಎಲ್ಲೆಲ್ಲಿವೆ ಎಂದು ಪತ್ತೆ ಹಚ್ಚಿ ನಾಶಪಡಿಸುವ ಕೆಲಸ ಈಗಾಗಲೇ ನಡೆಸುತ್ತಿದೆ. ಶಾಸಕನಾಗಿ ನನಗೆ ಜನರಲ್ಲಿ ಅರಿವು ಮೂಡಿಸುವ ಜವಾಬ್ದಾರಿಯಿದೆ. ನನ್ನ ಮನೆಯಿಂದಲೇ ಅದನ್ನು ಆರಂಭಿಸಲಾಗಿದೆ. ಡೆಂಗ್-ಮಲೇರಿಯ ಮುಕ್ತ ಮಂಗಳೂರಿಗೆ ಎಲ್ಲರ ಸಹಕಾರ ಬೇಕಾಗಿದೆ. ಆ ಮೂಲಕ ಸ್ವಚ್ಛ, ಸುಂದರ, ಆರೋಗ್ಯಪೂರ್ಣ ಮಂಗಳೂರು ನಮ್ಮದಾಗಬೇಕು ಎಂದರು.
ಗಾಂಧಿನಗರ ವ್ಯಾಪ್ತಿಯ ವಿವಿಧ ಮನೆಗಳಿಗೆ ಭೇಟಿ ನೀಡಿದ ಶಾಸಕರು ಹಾಗೂ ಪಾಲಿಕೆ ಮತ್ತು ಆರೋಗ್ಯ ಇಲಾಖೆ ಅಧಿಕಾರಿಗಳು ಜನರಲ್ಲಿ ಜಾಗೃತಿ ಮೂಡಿಸಿದರು. ನಿರ್ಮಾಣ ಹಂತದ ಕಟ್ಟಡದ ಕಾರ್ಮಿಕರಿಗೆ ಸಾಮಾಜಿಕ ಕಾರ್ಯಕರ್ತ ಸುರೇಶ್ ಶೆಟ್ಟಿ ಡೆಂಗ್ ಹೇಗೆ ಹರಡುತ್ತದೆ ಎಂದು ಅಧಿಕಾರಿಗಳು ವಿವರಿಸಿದರು. ಮನೆ ಆವರಣದಲ್ಲಿ ನೀರು ನಿಲ್ಲುವ ಸ್ಥಳಗಳನ್ನು ಪತ್ತೆ ಮಾಡಿ, ಅದನ್ನು ನಾಶಗೊಳಿಸುವುದರ ಜತೆಗೆ ಜನರಿಗೆ ಡೆಂಗ್ ಲಾರ್ವಗಳನ್ನು ತೋರಿಸಿ ಅದರ ಅಪಾಯದ ಕುರಿತು ಮಾಹಿತಿ ನೀಡಲಾಯಿತು.
ಪಾಲಿಕೆ ಆಯುಕ್ತ ಮುಹಮ್ಮದ್ ನಝೀರ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಕೃಷ್ಣ ರಾವ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನವೀನ್ ಕುಮಾರ್, ಪಾಲಿಕೆ ಆರೋಗ್ಯಾಧಿಕಾರಿ ಡಾ. ಮಂಜಯ್ಯ ಶೆಟ್ಟಿ, ಜಿಲ್ಲಾ ವಾರ್ತಾಧಿಕಾರಿ ಖಾದರ್ ಶಾ, ಪಾಲಿಕೆ ಮಾಜಿ ಸದಸ್ಯರಾದ ಪ್ರೇಮಾನಂದ ಶೆಟ್ಟಿ, ಪೂರ್ಣಿಮಾ, ಜಯಂತಿ ಆಚಾರ್, ಭಾಸ್ಕರ ಚಂದ್ರ ಶೆಟ್ಟಿ, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ರಮೇಶ್ ಕಂಡೆಟ್ಟು ಮತ್ತಿತರರು ಪಾಲ್ಗೊಂಡಿದ್ದರು.