8 ವರ್ಷದ ಬಾಲಕನಿಗೆ 9ನೇ ತರಗತಿಗೆ ನೇರ ಪ್ರವೇಶ: ಕಾರಣವೇನು ಗೊತ್ತಾ ?

Update: 2019-08-04 16:09 GMT

   ಲಕ್ನೋ, ಆ. 4: ಅಗಾಧ ಬುದ್ಧಿ ಮತ್ತೆಯ ಎಂಟು ವರ್ಷದ ಬಾಲಕ ರಾಷ್ಟ್ರಂ ಆದಿತ್ಯ ಶ್ರೀ ಕೃಷ್ಣನಿಗೆ 9ನೇ ತರಗತಿಗೆ ನೇರವಾಗಿ ದಾಖಲಾಗಲು ಉತ್ತರಪ್ರದೇಶ ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ. 2021ರಲ್ಲಿ ತನ್ನ 10ನೇ ವಯಸ್ಸಿನಲ್ಲಿ ಲಕ್ನೊದ ನಖಾಸ್ ಪ್ರದೇಶದಲ್ಲಿರುವ ಎಂ.ಡಿ. ಶುಕ್ಲಾ ಇಂಟರ್ ಕಾಲೇಜಿನಿಂದ 10ನೇ ತರಗತಿ ಪರೀಕ್ಷೆ ಎದುರಿಸಲು ಆತ ಸಿದ್ಧತೆ ನಡೆಸುತ್ತಿದ್ದಾನೆ.

ನಿಯಮದ ಪ್ರಕಾರ ಉತ್ತರಪ್ರದೇಶ ಶಿಕ್ಷಣ ಮಂಡಳಿಯ 10ನೇ ತರಗತಿ ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಕನಿಷ್ಠ 14 ವರ್ಷ ಆಗಿರಬೇಕು. ಆದರೆ, ರಾಷ್ಟ್ರಂಗೆ 10ನೇ ವಯಸ್ಸಿನಲ್ಲಿ 10ನೇ ತರಗತಿ ಪರೀಕ್ಷೆ ಬರೆಯಲು ಶಿಕ್ಷಣ ಮಂಡಳಿ ಅನುಮತಿ ನೀಡಲಾಗಿದೆ.

ಈ ಆದೇಶದ ಬಗ್ಗೆ ರಾಷ್ಟ್ರಂನ ತಂದೆಗೆ ಮಾಹಿತಿ ನೀಡಲಾಗಿದೆ ಎಂದು ಶಿಕ್ಷಣ ಮಂಡಳಿ ಕಾರ್ಯದರ್ಶಿ ನೀನಾ ಶ್ರೀವಾತ್ಸವ ತಿಳಿಸಿದ್ದಾರೆ.

‘‘ಈಗ ಆತ (ರಾಷ್ಟ್ರಂ) ಅಧ್ಯಯನದಲ್ಲಿ ಗಮನ ಕೇಂದ್ರೀಕರಿಸಿದ್ದಾನೆ. ಆತ ಪ್ರಾಥಮಿಕ ಶಿಕ್ಷಣವನ್ನು ಮನೆಯಲ್ಲಿಯೇ ಪಡೆದ. ಆತನಿಗೆ ಗಣಿತ, ಸಮಾಜ ವಿಜ್ಞಾನದ ಬಗ್ಗೆ ಉತ್ತಮ ಜ್ಞಾನವಿದೆ. ಯೋಗ ಹಾಗೂ ಧ್ಯಾನದಲ್ಲಿ ಆತ ನಿಪುಣ. ಆತ ಹಿಂದಿ, ಇಂಗ್ಲೀಷ್ ಹಾಗೂ ಫ್ರೆಂಚ್ ಭಾಷೆ ಮಾತನಾಡಬಲ್ಲ. ನಾವು ಉತ್ತರಪ್ರದೇಶದ ಶಿಕ್ಷಣ ಮಂಡಳಿಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದೆವು.’’ ಎಂದು ರಾಷ್ಟ್ರಂನ ತಂದೆ ಪವನ್ ಕುಮಾರ್ ಹೇಳಿದ್ದಾರೆ.

9ನೇ ತರಗತಿಗೆ ಸೇರಿಸುವಂತೆ ಕೋರಿ ರಾಷ್ಟ್ರಂನ ತಂದೆ ತನ್ನನ್ನು ಸಂಪರ್ಕಿಸಿದ್ದರು. ಅಧ್ಯಾಪಕರು ಪ್ರವೇಶ ಪರೀಕ್ಷೆ ನಡೆಸಿದರು. ಆತ ತನ್ನ ಅತ್ಯದ್ಭುತ ಪ್ರತಿಭೆಯನ್ನು ಸಾಬೀತುಪಡಿಸಿದ. 9ನೇ ತರಗತಿಗೆ ಪ್ರವೇಶ ನೀಡುವಂತೆ ಕೋರಿ ಉತ್ತರಪ್ರದೇಶ ಶಿಕ್ಷಣ ಮಂಡಳಿಗೆ ನಾವು ಪತ್ರ ಬರೆದೆವು. ಅನುಮತಿಯ ಬಳಿಕ ಔಪಚಾರಿಕತೆಯನ್ನು ಮುಗಿಸಿದೆವು ಎಂದು ಶಾಲೆಯ ಪ್ರಾಂಶುಪಾಲ ಎಚ್.ಎನ್. ಉಪಾಧ್ಯಾಯ ಹೇಳಿದ್ದಾರೆ.

ರಾಷ್ಟ್ರಂ ನೇರವಾಗಿ 9ನೇ ತರಗತಿಗೆ ದಾಖಲಾಗಲು ಶಿಕ್ಷಣ ಮಂಡಳಿ ವಿಶೇಷ ಅನುಮತಿ ನೀಡಿದೆ ಎಂದು ಶಾಲೆಗಳ ಜಿಲ್ಲಾ ಇನ್ಸ್‌ಪೆಕ್ಟರ್ ಮುಖೇಶ್ ಕುಮಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News