ಫ್ರಾನ್ಸ್‌ನಲ್ಲಿ ಸಲಿಂಗಿ ಸ್ತ್ರೀಯರಿಗೆ ಕೃತಕಗರ್ಭಧಾರಣೆಗೆ ಅನುಮತಿ: ಕರಡು ವಿಧೇಯಕ ಮಂಡನೆ
ಪ್ಯಾರಿಸ್,ಆ.4: ಅವಿವಾಹಿತ ಮಹಿಳೆಯರು ಹಾಗೂ ಮಹಿಳಾ ಸಲಿಂಗಿಗಳಿಗೆ ಕೃತಕ ಗರ್ಭದಾನ (ಐವಿಎಫ್) ವಿಧಾನದ ಮೂಲಕ ಮಕ್ಕಳನ್ನು ಪಡೆಯುವುದಕ್ಕೆ ಅವಕಾಶ ನೀಡುವ ವಿಧೇಯಕದ ಕರಡನ್ನು ಇಮ್ಯಾನುಯೆಲ್ ಮಾರ್ಕೊನ್ ನೇತೃತ್ವದ ಫ್ರೆಂಚ್ ಸರಕಾರವು ಸಂಸತ್‌ನಲ್ಲಿ ಮಂಡಿಸಿದೆ.
ಫ್ರಾನ್ಸ್‌ನಲ್ಲಿ ಅಸ್ತಿತ್ವದಲ್ಲಿರುವ ಹಾಲಿ ಕಾನೂನು ಸಂತಾಹೀನತೆಯ ಸಮಸ್ಯೆಯಿರುವ ವಿಭಿನ್ನಲಿಂಗಿ ದಂಪತಿಗೆ ಮಾತ್ರ ಐವಿಎಫ್ ವಿಧಾನದದಿಂದ ಮಕ್ಕಳನ್ನು ಪಡೆಯಲು ಅವಕಾಶ ನೀಡುತ್ತದೆ.
ಆದರೆ ಇದೀಗ ಫ್ರೆಂಚ್ ಸರಕಾರವು ಮಹಿಳಾ ಸಲಿಂಗಿಗಳಿಗೆ ಕೃತಕ ಗರ್ಭಧಾರಣೆ ವಿಧಾನದ ಮೂಲಕ ಮಕ್ಕಳನ್ನು ಪಡೆಯಲು ಅವಕಾಶ ನೀಡುವ ವಿಧೇಯಕ ಮಂಡಿಸಲು ಮುಂದಾಗಿರುವವುದು ಸಂಸತ್‌ನಲ್ಲಿ ಮಂದಿನ ತಿಂಗಳು ಭಾರೀ ಚರ್ಚೆಗೆ ಗ್ರಾಸವಾಗುವ ನಿರೀಕ್ಷೆಯಿದೆ.
ಫ್ರಾನ್ಸ್‌ನಲ್ಲಿ ಸಲಿಂಗಿ ವಿವಾಹದ ವಿರುದ್ಧ ಬೃಹತ್ ಪ್ರತಿಭಟನೆಗಳ ನಡೆದ ಐದು ವರ್ಷಗಳ ಬಳಿಕ ನೂತನ ವಿಧೇಯಕವನ್ನು ಫ್ರಾನ್ಸ್ ಸರಕಾರ ಜಾರಿಗೊಳಿಸಹೊರಟಿದೆ. ಫ್ರೆಂಚ್ ಸಂಸತ್‌ನಲ್ಲಿ ಮ್ಯಾಕ್ರೊನ್ ಸರಕಾರವು ಬಹುಮತವನ್ನು ಹೊಂದಿದೆ. ಪ್ರಸ್ತಾವಿತ ವಿಧೇಯಕದಲ್ಲಿ ಫ್ರೆಂಚ್ ಆರೋಗ್ಯಪಾಲನಾ ಯೋಜನೆಯು ಎಲ್ಲಾ ಮಹಿಳೆಯರಿಗೂ ಪ್ರಜನನ ಚಿಕಿತ್ಸೆಯ ವೆಚ್ಚವನ್ನು ಭರಿಸುವುದಕ್ಕೆ ಅನುಮತಿ ನೀಡುತ್ತದೆ. ಕೃತಕಗರ್ಭಧಾರಣೆಯ ಮೂಲಕ ಜನಿಸಿದ ಮಕ್ಕಳು 18 ವರ್ಷ ತಲುಪಿದಾಗ, ದಾನಿಯ ಗೌಪ್ಯತೆಯನ್ನು ತೆರವುಗೊಳಿಸುವುದಕ್ಕೂ ವಿಧೇಯಕವು ಅನುಮತಿ ನೀಡುತ್ತದೆ.