ಮಹಾರಾಷ್ಟ್ರದಲ್ಲಿ ಭಾರಿ ಮಳೆ: ಕೊಂಕಣ ರೈಲ್ವೆ ಹಲವು ರೈಲುಗಳ ಸಂಚಾರ ಸ್ಥಗಿತ

Update: 2019-08-04 16:45 GMT

ಉಡುಪಿ, ಆ.4: ಮಹಾರಾಷ್ಟ್ರದಲ್ಲಿ ಭಾರಿ ಮಳೆ ಸುರಿಯುತ್ತಿರುವ ಪರಿಣಾಮ ಕೇಂದ್ರ ರೈಲ್ಪೆಯ ಮುಂಬೈ ವಿಭಾಗದಲ್ಲಿ ರೈಲು ಹಳಿಗಳಲ್ಲಿ ನೀರು ನಿಂತಿದ್ದು, ಕೆಲವೆಡೆ ಬಂಡೆ ಕುಸಿದು ಬಿದ್ದಿರುವ ಪರಿಣಾಮ ಕೊಂಕಣಿ ರೈಲು ಮಾರ್ಗದಲ್ಲಿ ರವಿವಾರದ ಹಲವು ರೈಲು ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡಲಾಗಿದೆ.

ಅದೇ ರೀತಿ ಇನ್ನು ಕೆಲ ರೈಲು ಸಂಚಾರವನ್ನು ಅರ್ಧದಲ್ಲೇ ನಿಲ್ಲಿಸಿದ್ದು, ಕೆಲವು ರೈಲುಗಳ ಸಂಚಾರದಲ್ಲಿ ಬದಲಾವಣೆ ಮಾಡಲಾಗಿದೆ ಎಂದು ಕೊಂಕಣ ರೈಲ್ವೆಯ ಪ್ರಕಟಣೆ ತಿಳಿಸಿದೆ.

ಕುಂದಾಪುರದಿಂದ ಕುರ್ಲಾಕ್ಕೆ ಸಂಚರಿಸುವ ಮತ್ಸ್ಯಗಂಧ ಎಕ್ಸ್‌ಪ್ರೆಸ್(ರೈಲು ನಂ. 12620) ರೈಲ ಸಂಚಾರವನ್ನು ಕುಂದಾಪುರದಲ್ಲೇ ರದ್ದು ಮಾಡಲಾಗಿದೆ. ಕುರ್ಲಾದಿಂದ ಮಂಗಳೂರಿಗೆ ಬರುವ ರೈಲಿನ (12619) ಇಂದಿನ ಸಂಚಾರ ವನ್ನು ರದ್ದು ಮಾಡಲಾಗಿದೆ.

ಮಂಗಳೂರು ಜಂಕ್ಷನ್‌ನಿಂದ ಸಿಎಸ್‌ಎಂಟಿಗೆ ಸಂಚರಿಸುವ ರೈಲು ನಂ. 12134ನ್ನು ರದ್ದು ಮಾಡಲಾಗಿದೆ. ಸಿಎಸ್‌ಎಂಟಿನಿಂದ ಮಂಗಳೂರು ಜಂಕ್ಷನ್‌ಗೆ ಸಂಚರಿಸುವ (12133) ರೈಲು ಸಂಚಾರವನ್ನು ತಡೆ ಹಿಡಿಯಲಾಗಿದೆ.

ಎರ್ಲಾಕುಲಂಯಿಂದ ಕುರ್ಲಾಕ್ಕೆ ಸಂಚರಿಸುವ (22150) ಪೂರ್ಣ ಎಕ್ಸ್‌ಪ್ರೆಸ್‌ನ ಸಂಚಾರ ರದ್ದು ಮಾಡಲಾಗಿದೆ. ನೇತ್ರಾವತಿ ಎಕ್ಸ್‌ಪ್ರೆಸ್‌ನ (16346) ಸಂಚಾರವನ್ನು ಶೋರನೂರ್‌ನಲ್ಲಿ ರದ್ದು ಮಾಡಲಾಗಿದೆ. (16345) ಕುರ್ಲಾದಿಂದ ನೇತ್ರಾವತಿ ಎಕ್ಸ್‌ಪ್ರೆಸ್ ಸಂಚಾರ ರದ್ದಾಗಿದೆ.

ರೈಲು ನಂ.12202 ಗರೀಬ್ ರಥ್ ಎಕ್ಸ್‌ಪ್ರೆಸ್‌ನ ಕೊಚ್ಚಿವೆಲ್‌ಯಿಂದ ಕುರ್ಲಾ ಸಂಚಾರವನ್ನು ಕಣ್ಣೂರಿನಲ್ಲಿ ರದ್ದು ಮಾಡಲಾಗಿದೆ. ಕೊಚ್ಚುವೇಲ್ ನಿಂದ ಕುರ್ಲಾಕ್ಕೆ ಹೋಗುವ ನಾಳಿನ ರೈಲು ಸಂಚಾರ ಸ್ಥಗಿತ ಮಾಡಲಾಗಿದೆ. ಇದರಿಂದಾಗಿ ಕೊಂಕಣ ರೈಲು ಪ್ರಯಾಣಿಕರಾಗಿರುವ ತೊಂದರೆ ಗಳಿಗೆ ವಿಷಾಧಿಸುತ್ತೇವೆ ಎಂದು ಕೊಂಕಣಿ ರೈಲು ಪ್ರಕಟಣೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News