ಜಮ್ಮು ಕಾಶ್ಮೀರದಿಂದ ನಿರ್ಗಮಿಸಲು ಇಸ್ರೇಲ್ ನಾಗರಿಕರಿಗೆ ಸೂಚನೆ

Update: 2019-08-04 16:59 GMT

ಶ್ರೀನಗರ, ಆ.4: ಜಮ್ಮು ಕಾಶ್ಮೀರದಲ್ಲಿ ಭದ್ರತಾ ಎಚ್ಚರಿಕೆಯ ಮಧ್ಯೆಯೇ, ರಾಜ್ಯದಿಂದ ನಿರ್ಗಮಿಸುವಂತೆ ಇಸ್ರೇಲ್ ನಾಗರಿಕರಿಗೆ ಸೂಚಿಸುವ ಪ್ರಯಾಣ ಸಲಹಾ ಪತ್ರವನ್ನು ಇಸ್ರೇಲ್ ಸರಕಾರ ರವಿವಾರ ಜಾರಿಗೊಳಿಸಿದೆ.

  ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕರ ಬೆದರಿಕೆ ಹಾಗೂ ಅಲ್ಲಿರುವ ಇಸ್ರೇಲ್ ನಾಗರಿಕರನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕರು ಆಕ್ರಮಣ ನಡೆಸುವ ಬೆದರಿಕೆಯ ಹಿನ್ನೆಲೆಯಲ್ಲಿ ಆ ರಾಜ್ಯದಲ್ಲಿ ಪ್ರವಾಸಕ್ಕೆ ತೆರಳಿರುವ ಅಥವಾ ಅಲ್ಲಿ ನೆಲೆಸಿರುವ ಇಸ್ರೇಲ್ ಪ್ರಜೆಗಳು ತಕ್ಷಣ ಅಲ್ಲಿಂದ ನಿರ್ಗಮಿಸಬೇಕು . ಭಾರತದಲ್ಲಿರುವ ಇಸ್ರೇಲ್ ಪ್ರವಾಸಿಗಳ ಸಂಬಂಧಿಗಳಿಗೂ ಈ ಪತ್ರವನ್ನು ರವಾನಿಸಬೇಕು ಎಂದು ಇಸ್ರೇಲ್‌ನ ಪ್ರಧಾನಮಂತ್ರಿಗಳ ಕಚೇರಿ ಹೊರಡಿಸಿದ ಪ್ರಯಾಣ ಸಲಹಾ ಪತ್ರದಲ್ಲಿ ತಿಳಿಸಲಾಗಿದೆ.

 ಜಮ್ಮು ಕಾಶ್ಮೀರದಲ್ಲಿ ಸರಣಿ ಆತ್ಮಾಹುತಿ ದಾಳಿಗೆ ಭಯೋತ್ಪಾದಕರು ಸಜ್ಜಾಗಿದ್ದಾರೆ ಎಂಬ ಮಾಹಿತಿ ಆಗಸ್ಟ್ 2ರಂದು ದೊರೆತಿದೆ ಎಂದು ಭದ್ರತಾ ಪಡೆಗಳು ಹೇಳಿವೆ. ಆ ಬಳಿಕ ಭಾರತ ಸರಕಾರ ಕಾಶ್ಮೀರದಿಂದ ತಕ್ಷಣ ನಿರ್ಗಮಿಸುವಂತೆ ಯಾತ್ರಾರ್ಥಿಗಳು ಹಾಗೂ ಪ್ರವಾಸಿಗರಿಗೆ ಸೂಚನೆ ನೀಡಿತ್ತು.

  ಇಂಗ್ಲೆಂಡ್, ಜರ್ಮನಿ ಮತ್ತು ಆಸ್ಟ್ರೇಲಿಯಾ ದೇಶಗಳೂ ಕಾಶ್ಮೀರದಿಂದ ನಿರ್ಗಮಿಸುವಂತೆ ಅಥವಾ ಆ ರಾಜ್ಯಕ್ಕೆ ಪ್ರವಾಸ ತೆರಳದಂತೆ ತಮ್ಮ ಪ್ರಜೆಗಳಿಗೆ ಎಚ್ಚರಿಕೆ ನೀಡುವ ಪತ್ರವನ್ನು ಈಗಾಗಲೇ ಹೊರಡಿಸಿವೆ. ಕಳೆದ ಒಂದು ವಾರದಲ್ಲಿ ಜಮ್ಮು ಕಾಶ್ಮೀರದಲ್ಲಿ ಕೇಂದ್ರ ಸರಕಾರ ಭದ್ರತಾ ವ್ಯವಸ್ಥೆಯನ್ನು ಭಾರೀ ಪ್ರಮಾಣದಲ್ಲಿ ಹೆಚ್ಚಿಸಿದ್ದು 35000 ಅರೆಸೇನಾ ಪಡೆಯ ಸಿಬಂದಿಗಳನ್ನು ಹೆಚ್ಚುವರಿಯಾಗಿ ನಿಯೋಜಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News