ಬದುಕು ಸಂತೋಷಮಯವಾಗಿದ್ದರೆ ರಂಗಭೂಮಿ ಮಾಡಲು ಸಾಧ್ಯವಿಲ್ಲ: ಮೋಹನಚಂದ್ರ
ಮಂಗಳೂರು: ನಮ್ಮ ಬದುಕಿನಲ್ಲಿ ನಾವು ಸಂತೋಷದಿಂದಿದ್ದರೆ ನಾವು ರಂಗಭೂಮಿಯಲ್ಲಿ ನಿರಂತರವಾಗಿ ದುಡಿಯಲು ಸಾಧ್ಯವಿಲ್ಲ ಎಂದು ಕರ್ನಾಟಕ ಬೀದಿ ನಾಟಕ ಅಕಾಡೆಮಿ ನೀಡುವ ಸಿಜಿಕೆ ರಂಗಪುರಸ್ಕಾರವನ್ನು ಸ್ವೀಕರಿಸಿದ ಸಂದರ್ಭದಲ್ಲಿ ರಂಗಕರ್ಮಿ ಮೋಹನಚಂದ್ರ ಅವರು ಅಭಿಪ್ರಾಯಪಟ್ಟರು.
ಮುಂದೆ ತಮ್ಮ ಅನುಭವದ ಬಗ್ಗೆ ಹೇಳುತ್ತಾ, ರಂಗಭೂಮಿ ನನಗೆ ಜನರ ಜೊತೆ ನೇರವಾಗಿ ಕೆಲಸ ಮಾಡಲು ಸಹಕಾರಿಯಾಗಿದೆ. ತುಂಬಾ ಸಂಕಷ್ಟದ ಸಂದರ್ಭದಲ್ಲಿ ಕೆಲಸ ಮಾಡಿದ್ದರಿಂದ ಜನರ ಸಮಸ್ಯೆಗಳನ್ನು ನಮ್ಮದಾಗಿಸಿ ಭಾವನೆಗಳನ್ನು ಹೊರಹಾಕಲು ರಂಗಭೂಮಿ ಸಹಕಾರಿಯಾಗುತಿತ್ತು ಎಂದು ನುಡಿದರು. ಬೆಂಗಳೂರಿನ ಪ್ರಖ್ಯಾತ ರಂಗಕರ್ಮಿ ಶಶಿಧರ್ ಅಡಪರವರು ಮಾತನಾಡಿ ಸಿಜಿಕೆಯವರಿಗೆ ಮಾಂತ್ರಿಕ ಶಕ್ತಿಯಿತ್ತು. ಆ ಶಕ್ತಿಯೇ ಅವರನ್ನು ಎಲ್ಲಾ ವರ್ಗದವರನ್ನು ಸೆಳೆಯಲು ಸಾಧ್ಯವಾಗಿತ್ತು ಎಂದರು.
ಅಭಿನಂದನಾ ನುಡಿಯಲ್ಲಿ ಶ್ರೀ ಮನೋಹರ್ ಪ್ರಸಾದ್ ಅವರು ಮಾತನಾಡಿ ಮೋಹನಚಂದ್ರರವರ ಕೆಲಸ ತುಂಬಾ ಅಚ್ಚುಕಟ್ಟಾದ, ಶಿಸ್ತಿನಿಂದ ಕೂಡಿದ್ದಾಗಿದ್ದು, ಅವರ ಕಾರ್ಯವನ್ನು ತಾನು ಸುಮಾರು ನಾಲ್ಕು ದಶಕಗಳಿಂದ ಬಲ್ಲೆನು, ಹಾಗಾಗಿ ಅಂತಹ ಒಬ್ಬ ರಂಗಕರ್ಮಿಗೆ ಈ ಪ್ರಶಸ್ತಿ ದಕ್ಕಿದ್ದು ಬಹಳ ಯೋಗ್ಯವಾದುದು ಎಂದು ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿದರು.
ರಂಗನಟ ಚಂದ್ರಹಾಸರವರು ಮೋಚರವರೊಂದಿಗಿನ ಓಡಾಟದ ನೆನಪುಗಳನ್ನು ಮೆಲುಕು ಹಾಕಿಕೊಂಡರು. ಧರ್ಮದರ್ಶಿ ಹರಿಕೃಷ್ಣ ಪುನರೂರು ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ ಮೋಹನಚಂದ್ರರವರನ್ನು ಅಭಿನಂದಿಸಿ ಮುಂದಿನ ಎಲ್ಲಾ ಕಾರ್ಯಕ್ರಮಗಳಿಗೆ ಶುಭಾಷಯ ಹಾಗೂ ಸಹಕಾರ ನೀಡುವುದಾಗಿ ತಿಳಿಸಿದರು.
ಪಾದುವ ಕಾಲೇಜಿನ ಪ್ರಾಂಶುಪಾಲರಾದ ವಂದನೀಯ ಆಲ್ವಿನ್ ಸೆರಾವೊರವರು ಸ್ವಾಗತಿಸಿದರು. ಅರೆಹೊಳೆ ಪ್ರತಿಷ್ಠಾನದ ಅರೆಹೊಳೆ ಸದಾಶಿವರಾವ್ ವಂದಿಸಿದರು. ಕ್ರಿಸ್ಟೋಫರ್ ನೀನಾಸಂ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಮೊದಲು ಕಾಲೇಜಿನಲ್ಲಿ ನಡೆಯುವ ನೂರು ದಿನದ ರಂಗ ಶಿಬಿರದ ಶಿಬಿರಾರ್ಥಿಗಳಿಂದ, ಶ್ರೀ. ವಿಘ್ನೇಶ್ ಹೊಳ್ಳ ತೆಕ್ಕಾರು ನಿರ್ದೇಶನದ 'ಪ್ರಕೃತಿ ಮೇಲಿನ ವಿಕೃತಿ' ಕುರಿತಾದ ಬೀದಿನಾಟ್ಕದ ಪ್ರದರ್ಶನ ಜರುಗಿತು. ಕರ್ನಾಟಕ ರಾಜ್ಯಾದ್ಯಂತ, ಪ್ರತೀ ಜಿಲ್ಲೆಯಲ್ಲಿ ಸಿಜಿಕೆ ಬೀದಿ ರಂಗ ದಿನದ ಅಂಗವಾಗಿ ನೀಡುವ ಈ ಪುರಸ್ಕಾರವನ್ನು ಮಂಗಳೂರಿನ ರಂಗ ಸಂಸ್ಥೆಗಳಾದ ಪಾದುವ ರಂಗ ಅಧ್ಯಯನ ಕೇಂದ್ರ, ಅಸ್ತಿತ್ವ (ರಿ) ಹಾಗೂ ಅರೆಹೊಳೆ ಪ್ರತಿಷ್ಠಾನ ಜಂಟಿಯಾಗಿ ಆಯೋಜಿಸಿದ್ದರು.