ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೋಮುವಾದಿ ಭಾವನೆಯ ಸಿಬ್ಬಂದಿ ಹೊರಹಾಕಿ: ಬಿ.ಕೆ.ಇಮ್ತಿಯಾಝ್
ಮಂಗಳೂರು: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇತ್ತೀಚೆಗೆ ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗವು ತಪಾಸಣೆ ಹೆಸರಿನಲ್ಲಿ ಪ್ರಯಾಣಿಕರಿಗೆ ಕಿರುಕುಳ ನೀಡುತ್ತಿದ್ದು, ಕೋಮುವಾದಿ ಮನೋಭಾವನೆಯ ಸಿಬ್ಬಂದಿಯನ್ನು ಹೊರಹಾಕಬೇಕು ಎಂದು ವಿಮಾನ ನಿಲ್ದಾಣ ಬಳಕೆದಾರರ ಹಿತರಕ್ಷಣಾ ಸಮಿತಿ ಸಂಚಾಲಕ ಬಿ.ಕೆ. ಇಮ್ತಿಯಾಝ್ ಆಗ್ರಹಿಸಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕ ವಿ.ವೆಂಕಟೇಶ್ವರ ರಾವ್ ಅವರನ್ನು ಸೋಮವಾರ ಭೇಟಿಯಾಗಿ ಮನವಿ ಸಲ್ಲಿಸಿದ ಅವರು, ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗದ ಸಿಬ್ಬಂದಿ ತಮ್ಮ ವರ್ತನೆಯನ್ನು ಸರಿಪಡಿಸಿ ಪ್ರಯಾಣಿಕ ಸ್ನೇಹಿ ವಿಮಾನ ನಿಲ್ದಾಣವಾಗಿ ಮಾರ್ಪಡಿಸಬೇಕು ಎಂದು ಒತ್ತಾಯಿಸಿದರು.
ಕಸ್ಟಮ್ಸ್ ಮತ್ತು ಇಮಿಗ್ರೇಷನ್ ವಿಭಾಗದ ಸಿಬ್ಬಂದಿ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಯಾಣಿಕರೊಂದಿಗೆ ದುರ್ವರ್ತನೆ ಮುಂದುವರಿದಲ್ಲಿ ವಿಮಾನ ಯಾತ್ರಿಗಳನ್ನು ಸಂಘಟಿಸಿ ತೀವ್ರ ರೀತಿಯ ಪ್ರತಿಭಟನೆ ನಡೆಸಬೇಕಾದೀತು ಎಂದೂ ಅವರು ಎಚ್ಚರಿಕೆ ನೀಡಿದರು.
ಕಸ್ಟಮ್ಸ್ ಅಧಿಕಾರಿಗಳ ಅಮಾನವೀಯ ವರ್ತನೆಯಿಂದಾಗಿ ವಿಮಾನ ನಿಲ್ದಾಣದ ಘನತೆ ಮತ್ತು ಗೌರವಕ್ಕೆ ಧಕ್ಕೆ ಆಗುತ್ತಿದೆ. ಕೇರಳದ ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣದ ದಬ್ಬಾಳಿಕೆ ವಿರುದ್ಧ ಅಭಿಯಾನವೇ ನಡೆಯುತ್ತಿದೆ. ಮಂಗಳೂರು ವಿಮಾನ ನಿಲ್ದಾಣಕ್ಕಾಗಿ ಇಲ್ಲಿನ ಜನರು ನೆಲ-ಜಲ ಎಲ್ಲವನ್ನು ತ್ಯಾಗ ಮಾಡಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವಾಗಿ ಮೇಲ್ದರ್ಜೆಗೇರಿದೆ. ಇಲ್ಲಿಂದ ಪ್ರಯಾಣಿಸುವ ವಿಮಾನ ಯಾತ್ರಿಗಳೊಂದಿಗೆ ಒಳ್ಳೆಯ ರೀತಿಯಲ್ಲಿ ವ್ಯವಹರಿಸುವಂತೆ ಸಿಬ್ಬಂದಿಗೆ ಸೂಚಿಸಬೇಕೆಂದು ಒತ್ತಾಯಿಸಿದರು.
ನಿರ್ದಿಷ್ಟ ಸಮುದಾಯ ಮತ್ತು ಕಾಸರಗೋಡು, ಭಟ್ಕಳದ ಪ್ರಯಾಣಿಕರನ್ನು ಗುರಿಯಾಗಿಸಿಕೊಂಡು ತಪಾಸಣೆ ಹೆಸರಿನಲ್ಲಿ ಅವಮಾನ ಮಾಡಲಾಗುತ್ತಿದೆ. ಇದು ವಿಮಾನ ನಿಲ್ದಾಣದ ಭವಿಷ್ಯದ ಮೇಲೆ ದೂರಗಾಮಿ ಪರಿಣಾಮ ಬೀರಬಹುದು. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ನಿಯೋಗದಲ್ಲಿ ಸಮಿತಿಯ ಪ್ರಮುಖರಾದ ಹಾರಿಸ್ ಬೈಕಂಪಾಡಿ, ಮೊಯಿಷೀರ್ ಅಹ್ಮದ್ ಸಾಮನಿಗೆ, ಬಾವ ಪದರಂಗಿ, ಮಧುಸೂದನ ಗೌಡ, ಬಿ. ಎಸ್ ಬಶೀರ್ ಜೋಕಟ್ಟೆ, ಮುಹಮ್ಮದ್ ಸಾಲಿ ಬಜ್ಪೆ, ಬಾತಿಷ್ ಅಳಕೆಮಜಲು, ಕಿಶೋರ್ ಶೆಟ್ಟಿ, ಮುಫೀದ್ ಉಪಸ್ಥಿತರಿದ್ದರು.