ಮೌಲ್ಯಾಧಾರಿತ ರಾಜಕೀಯ ನಿರೀಕ್ಷೆ: ತಾಹೀರ್ ಹುಸೈನ್
ಮಂಗಳೂರು, ಆ.5: ದೇಶದ ಮತದಾರರು ಪ್ರಸಕ್ತ ರಾಜಕೀಯವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಮುಂದಿನ ದಿನಗಳಲ್ಲಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿಯನ್ನು ಸಂಪೂರ್ಣವಾಗಿ ಸೋಲಿಸಲಿದ್ದಾರೆ. ಮತದಾರರು ಮೌಲ್ಯಾಧಾರಿತ ರಾಜಕೀಯ ನಿರೀಕ್ಷೆಯಲ್ಲಿದ್ದಾರೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯದ ರಾಜ್ಯ ಘಟಕದ ಅಧ್ಯಕ್ಷ ತಾಹೀರ್ ಹುಸೈನ್ ತಿಳಿಸಿದ್ದಾರೆ.
ನಗರದ ವೆಲ್ಫೇರ್ ಪಾರ್ಟಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇವಲ ಬಿಜೆಪಿಯಷ್ಟೇ ಅಲ್ಲ, ಬರದ ಪರಿಸ್ಥಿತಿ ಇರುವಾಗಲೂ ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ರಾಜಕೀಯ ಮಾಡುತ್ತಾ ಕಾಲಹರಣ ಮಾಡಿದ್ದು, ಇಂತಹ ಭ್ರಷ್ಟ ರಾಜಕೀಯ ಪಕ್ಷಗಳನ್ನು ಮತದಾರರು ಮೂಲೆ ಗುಂಪಾಗಿಸಲಿದ್ದಾರೆ ಎಂದರು.
ಇದಕ್ಕೆಲ್ಲ ಮೌಲ್ಯಾಧಾರಿತ ರಾಜಕೀಯವೇ ಪರ್ಯಾಯವಾಗಿದ್ದು, ಜನತೆ ಇದರ ನಿರೀಕ್ಷೆಯಲ್ಲಿದ್ದಾರೆ. ಇದನ್ನೇ ತನ್ನ ಉಸಿರಾಗಿಸಿರುವ ವೆಲ್ಫೇರ್ ಪಾರ್ಟಿಯ ಸಿದ್ಧಾಂತವನ್ನು ಮತದಾರರು ಮನಗಂಡು, ಪುರಸಭೆ, ನಗರಸಭೆ, ವಿಧಾನಸಭೆ ಹಾಗೂ ಲೋಕಸಭೆ ಚುನಾವಣೆಗಳಲ್ಲಿ ಪಕ್ಷದ ಪ್ರಾಮಾಣಿಕ ಅಭ್ಯರ್ಥಿಗಳನ್ನು ಆರಿಸುವ ಮೂಲಕ, ಮೌಲ್ಯಾಧಾರಿತ ರಾಜಕೀಯಕ್ಕೆ ಬೆಂಬಲ ನೀಡಬೇಕು ಎಂದರು.
ಸಮ್ಮಿಶ್ರ ಸರಕಾರದ 14 ತಿಂಗಳು ಆಗುವಾಗಲೇ ಬಿಜೆಪಿ ತನ್ನ ಆಪರೇಶನ್ ಕಮಲದ ಮೂಲಕ ಮತ್ತೆ ಆಡಳಿತ ಪಕ್ಷದ ಶಾಸಕರನ್ನು ಖರೀದಿಸಿ, ರೆಸಾರ್ಟಿನಲ್ಲಿಟ್ಟು, ಸರಕಾರ ಉರುಳಿಸಿದೆ. ಪ್ರಧಾನಿ ಮೋದಿಯವರು, ಸಂವಿಧಾನ ಪಾಲಿಸ ಬೇಕಾದವರು ತಮಗೇನೂ ಸಂಬಂಧವೇ ಇಲ್ಲದಂತೆ ವರ್ತಿಸುವ ಮೂಲಕ ಇದಕ್ಕೆಲ್ಲಾ ಪರೋಕ್ಷವಾಗಿ ಸಮ್ಮತಿ ಸೂಚಿಸುತ್ತಿದ್ದಾರೆ ಎಂದರು.
ತರಾತುರಿಯಲ್ಲಿ ಟಿಪ್ಪು ಜಯಂತಿ ರದ್ದು: ಬಿಜೆಪಿಯು ಅಧಿಕಾರಕ್ಕೆ ಬಂದ ಆರಂಭದಲ್ಲಿಯೇ ರೈತರು- ಜನರು ಅನುಭವಿಸುವ ಸಮಸ್ಯೆಗಳಿಗೆ ಶೀಘ್ರ ಸ್ಪಂದಿಸುವ ಬದಲು, ತರಾತುರಿಯಲ್ಲಿ ಟಿಪ್ಪು ಸುಲ್ತಾನ್ ದಿನಾಚರಣೆಯನ್ನು ರದ್ದುಗೊಳಿಸಿದೆ. ಟಿಪ್ಪು ಸುಲ್ತಾನ್ ಒಂದು ಸಮುದಾಯದ ಪ್ರತನಿಧಿಯಂತೆ ಚಿತ್ರಿಸಿ, ರಾಜಕೀಯ ಮಾಡುತ್ತಿದೆ. ಅವರು ಅಖಂಡ ಭಾರತವನ್ನು ಬ್ರಿಟಿಷರಿಂದ ರಕ್ಷಿಸಲು ಹೋರಾಡಿದ ಪ್ರಥಮ ಸ್ವಾತಂತ್ರ್ಯ ಹೋರಾಟಗಾರ. ಬಿಜೆಪಿಯ ಕೋಮು ಆಧಾರಿತವಾದ ಈ ತೀರ್ಮಾನ ನಾವು ವಿರೋಧಿಸುತ್ತೇವೆ. ಅದರ ಬದಲು ರಾಜ್ಯ ಸರಕಾರ ಟಿಪ್ಪುವಿನ ಹೆಸರಲ್ಲಿ ರಾಕೆಟ್ ಸೈನ್ಸ್ ಅಭಿವೃದ್ಧಿ ಪಡಿಸಲಿ ಎಂದು ಆಗ್ರಹಿಸಿದರು.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಹಬೀಬುಲ್ಲಾ ಖಾನ್, ಕೋಶಾಧಿಕಾರಿ ರಿಯಾಝ್ ಅಹ್ಮದ ಪಾಷಾ, ಕಾರ್ಯದರ್ಶಿ ಮೊಯಿನುದ್ದೀನ್ ಖಮರ್, ಜಿಲ್ಲಾ ಘಟಕದ ಅಧ್ಯಕ್ಷ ಸುಲೈಮಾನ್ ಕಲ್ಲರ್ಪೆ, ಉಪಾಧ್ಯಕ್ಷ ಎಸ್.ಎಂ. ಮುತ್ತಲಿಬ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತಾಜ್ ಸೈಕಲ್ ಮಾಲಕ ಎಸ್.ಎಂ. ಮುತ್ತಲಿಬ್ ಅವರನ್ನು ಮಂಗಳೂರು ವಲಯ ಅಧ್ಯಕ್ಷರಾಗಿಯೂ, ಅನಿವಾಸಿ ಉದ್ಯಮಿ ಮುಹಮ್ಮದ್ ಇಕ್ಬಾಲರನ್ನು ಉಪಾಧ್ಯಕ್ಷರಾಗಿಯೂ ಆಯ್ಕೆ ಮಾಡಲಾಯಿತು.