​ಸಂಸದ ನಳಿನ್‌ ಕುಮಾರ್ ಕಟೀಲ್‌ಗೆ ಜಾಮೀನು ರಹಿತ ವಾರಂಟ್ ಜಾರಿ

Update: 2019-08-05 14:49 GMT

ಮಂಗಳೂರು, ಆ.5: ಪ್ರಚೋದನಕಾರಿ ಭಾಷಣ ಮಾಡಿದ ಆರೋಪದಲ್ಲಿ ದಾಖಲಾದ ಪ್ರಕರಣಕ್ಕೆ ಸಂಬಂಧಿಸಿ ನ್ಯಾಯಾಲಯಕ್ಕೆ ಗೈರಾದ ಹಿನ್ನೆಲೆಯಲ್ಲಿ ದ.ಕ. ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಬೆಂಗಳೂರು ವಿಶೇಷ ನ್ಯಾಯಾಲಯ ಸೋಮವಾರ ಜಾಮೀನು ರಹಿತ ವಾರಂಟ್ ಜಾರಿ ಮಾಡಿದೆ.

ಕೆಲವು ವರ್ಷ ಹಿಂದೆ ಕೊಣಾಜೆಯಲ್ಲಿ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ನಳಿನ್ ಕುಮಾರ್ ಕಟೀಲ್ ವಿರುದ್ಧ ಕೊಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣ ಪ್ರಸಕ್ತ ಬೆಂಗಳೂರಿನ ವಿಶೇಷ ಕೋರ್ಟ್‌ನಲ್ಲಿ ವಿಚಾರಣೆಯಲ್ಲಿದೆ. ಸೋಮವಾರ ಕೋರ್ಟ್ ವಿಚಾರಣೆಗೆ ಸಂಸದರು ಗೈರಾಗಿರುವ ಹಿನ್ನೆಲೆಯಲ್ಲಿ ವಿಶೇಷ ಕೋರ್ಟಿನ ನ್ಯಾಯಾಧೀಶರು ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದ್ದಾರೆ.

ಸಂಸದರಿಗೆ ನ್ಯಾಯಾಲಯದ ನೀತಿ ನಿಯಮಗಳ ಬಗ್ಗೆ ಅತೀವ ಗೌರವವಿದೆ. ಆದರೆ ಸೋಮವಾರ ಕೇಂದ್ರ ಸರಕಾರದಿಂದ ಮಂಡಿಸಲಾದ ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಕಲಂ 370 ಹಾಗೂ 35ಎ ರದ್ದುಗೊಳಿಸುವ ವಿಚಾರಕ್ಕೆ ಸಂಬಂಧಿಸಿ ಕಲಾಪದಲ್ಲಿ ಕಡ್ಡಾಯ ಹಾಜರಿರುವಂತೆ ಬಿಜೆಪಿಯ ಸದಸ್ಯರಿಗೆ ವಿಪ್ ಜಾರಿಗೊಳಿಸಲಾಗಿತ್ತು. ಆದ್ದರಿಂದ ನ್ಯಾಯಾಲಯಕ್ಕೆ ಹಾಜರಾಗಲು ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಸಾಧ್ಯವಾಗಿರಲಿಲ್ಲ ಎಂದು ಸಂಸದರ ಕಚೇರಿ ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News