×
Ad

ಗಾಳಿಮಳೆ: ಉಡುಪಿ ಜಿಲ್ಲೆಯಾದ್ಯಂತ ಹಲವು ಮನೆಗಳಿಗೆ ಹಾನಿ

Update: 2019-08-05 20:33 IST

ಉಡುಪಿ, ಆ.5: ಉಡುಪಿ ಜಿಲ್ಲೆಯಾದ್ಯಂತ ಸುರಿಯುತ್ತಿರುವ ಭಾರೀ ಗಾಳಿ ಮಳೆಯಿಂದ ಹಲವು ಮನೆಗಳಿಗೆ ಹಾನಿಯಾಗಿದ್ದು, ಇದರಿಂದ ಮನೆಯಲ್ಲಿದ್ದ ಓರ್ವ ಮಹಿಳೆ ಗಾಯಗೊಂಡ ಬಗ್ಗೆ ವರದಿಯಾಗಿದೆ.

ಕಳೆದ 24 ಗಂಟೆಯ ಅವಧಿಯಲ್ಲಿ ಉಡುಪಿ ತಾಲೂಕಿನಲ್ಲಿ 49ಮಿ.ಮೀ., ಕುಂದಾಪುರ -59.1 ಮಿ.ಮೀ. ಹಾಗೂ ಕಾರ್ಕಳ ತಾಲೂಕಿನಲ್ಲಿ 58 ಮಿ.ಮೀ. ಸಹಿತ ಸರಾಸರಿ 56.1ಮಿ.ಮೀ .ಮಳೆಯಾಗಿರುವ ಬಗ್ಗೆ ವರದಿಯಾಗಿದೆ.

ಆ.4ರಂದು ನಸುಕಿನ ವೇಳೆ ಬ್ರಹ್ಮಾವರ ತಾಲೂಕಿನ ಪಾರಂಪಳ್ಳಿ ಗ್ರಾಮದ ಪರಮೇಶ್ವರ ಆಚಾರ್ಯ ಎಂಬವರ ವಾಸ್ತವ್ಯದ ಮನೆ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿದ್ದು, 100,000ರೂ. ನಷ್ಟ ಅಂದಾಜಿಸಲಾಗಿದೆ. ಈ ವೇಳೆ ಮನೆಯೊಳಗೆ ಮಲಗಿದ್ದ ಪರಮೇಶ್ವರ ಆಚಾರ್ಯರ ಪತ್ನಿ ಪದ್ಮಾವತಿ ಎಂಬ ವರು ಗಾಯಗೊಂಡಿದ್ದು, ಅವರನ್ನು ಮಣಿಪಾಲ ಆಸ್ಪತ್ರೆೆ ಒಳರೋಗಿಯಾಗಿ ದಾಖಲಿಸಲಾಗಿದೆ.

ಆ.5ರಂದು ಆರೂರು ಗ್ರಾಮದ ಬಂಗ್ಲೆಗುಡ್ಡೆಯ ರಮೇಶ್ ಎಂಬವರ ಮನೆಯ ಮೇಲೆ ಮರ ಬಿದ್ದು 25ಸಾವಿರ ರೂ. ಮತ್ತು ಹಾರಾಡಿ ಗ್ರಾಮದ ಹೊನ್ನಾಳದ ಇಬ್ರಾಹಿಂ ಸಾಹೇಬ್ ಎಂಬವರ ಮನೆಯ ಹೆಂಚು ಹಾರಿ ಹೋಗಿ 40ಸಾವಿರ ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

ಆ.5ರಂದು ಕಾರ್ಕಳ ತಾಲೂಕಿನ ಸಾಣೂರು ಗ್ರಾಮದಲ್ಲಿ ಗಾಳಿ ಮಳೆ ಯಿಂದ ವಿನೋದ ಶೆಟ್ಟಿ ಹಾಗೂ ಕಮಲ ನಾಯಕ್ ಎಂಬವರ ಮನೆಗಳಿಗೆ ಹಾನಿ ಸಂಭವಿಸಿದ್ದು, ಕ್ರಮವಾಗಿ 15ಸಾವಿರ ರೂ. ಹಾಗೂ 10ಸಾವಿರ ರೂ. ನಷ್ಟ ಉಂಟಾಗಿದೆ. ಅದೇ ರೀತಿ ಹಿರ್ಗಾನ ಗ್ರಾಮದ ಅಣ್ಣು ಎಂಬವರ ಮನೆಯ ಹೆಂಚು ಹಾರಿ 5ಸಾವಿರ ರೂ. ನಷ್ಟವಾಗಿದೆ.

ಬೈಂದೂರಿನಲ್ಲಿ ಅಪಾರ ಹಾನಿ

ಆ.5ರಂದು ಭಾರೀ ಮಳೆಗಾಳಿಯಿಂದಾಗಿ ತೆಂಗಿನ ಮರ ಬಿದ್ದು ಬಿಜೂರು ಗ್ರಾಮದ ಚಿಕ್ಕು ಶೆಡ್ತಿ ಮನೆಗೆ 35ಸಾವಿರ ರೂ., ಸದಾಶಿವ ಶೇರಿಗಾರ್ ಮನೆಗೆ 45ಸಾವಿರ ರೂ., ಮಡೂರ ಪೂಜಾರಿ ಮನೆಗೆ 25ಸಾವಿರ ರೂ. ನಷ್ಟ ಉಂಟಾಗಿದೆ. ಬೈಂದೂರು ಗ್ರಾಮದ ಗೋವಿಂದ ರಾಯ ಎಂಬವರ ಮನೆಯ ಶೀಟ್ ಹಾರಿ 50ಸಾವಿರ ರೂ., ಮರ ಬಿದ್ದು ತಿಮ್ಮಪ್ಪ ಮನೆಗೆ 50ಸಾವಿರ ರೂ. ಸಚ್ಚಿ ಶೆಟ್ಟಿಯ ಮನೆಗೆ 10ಸಾವಿರ ರೂ. ನಷ್ಟವಾಗಿದೆ ಮತ್ತು ಇವರ 19 ಅಡಕೆ ಮರ ಮತ್ತು ಒಂದು ತೆಂಗಿನ ಮರ ಧರೆಗೆ ಉರುಳಿದೆ.

ಗಾಳಿಯಿಂದಾಗಿ ಪಡುವರಿ ಗ್ರಾಮದ ಮನೆಗಳಿಗೆ ಹಾನಿಯಾಗಿ ಪರಮೇಶ್ವರ 50ಸಾವಿರ ರೂ., ಬೀಚು 5ಸಾವಿರ ರೂ., ಸುಬ್ಬಿ 35ಸಾವಿರ ರೂ., ನಝ್ರತ್ 20ಸಾವಿರ ರೂ., ಸರೋಜ ಮೊಗವೀರ ಎಂಬವರಿಗೆ 20ಸಾವಿರ ರೂ. ನಷ್ಟ ಉಂಟಾಗಿದೆ. ಮನೆಯ ಹೆಂಚು ಹಾರಿ ಯಡ್ತರೆ ಗ್ರಾಮದ ಕಾವೇರಿ ಎಂಬ ವರಿಗೆ 20ಸಾವಿರ ರೂ., ದಾರು ಎಂಬವರಿಗೆ 20ಸಾವಿರ ರೂ., ನಾಗಮ್ಮ ಎಂಬವರಿಗೆ 2ಸಾವಿರ ರೂ., ಅಮ್ಮಕ್ಕ ಎಂಬವರಿಗೆ 15ಸಾವಿರ ರೂ., ವಿಲಿಯಂ ಡಯಸ್ ಎಂಬವರಿಗೆ 10ಸಾವಿರ ರೂ. ನಷ್ಟ ಉಂಟಾಗಿದೆ.

ಭಾರೀ ಗಾಳಿಮಳೆಗೆ ಮುದೂರು ಗ್ರಾಮದ ರೋಸಿ ಪಿ.ಜೋಸೆಫ್ ಎಂಬವರ ತೋಟದಲ್ಲಿನ 500 ಬಾಳೆಗಿಡ ಧರೆಗೆ ಉರುಳಿ ಬಿದ್ದು, ಸುಮಾರು 25ಸಾವಿರ ರೂ. ನಷ್ಟ ಅಂದಾಜಿಸಲಾಗಿದೆ. ಆ.4ರಂದು ಕಂಬದಕೋಣೆ ಗ್ರಾಮದ ಅಣ್ಣಪ್ಪಬಳೆಗಾರ ಇವರ ಮನೆ ಮತ್ತು ಕೋಟಿಗೆ ಮೇಲೆ ಮರಬಿದ್ದು ಭಾಗಶಃ ಹಾನಿಯಾಗಿ 200,000ರೂ. ಮತ್ತು ಕಾಲ್ತೋಡು ಗ್ರಾಮದ ಶಿವ ರಾಮ ಹರಿಜನ ಎಂಬವರ ಮನೆಯ ಗೋಡೆ ಕುಸಿದು 40,000ರೂ. ನಷ್ಟ ಉಂಟಾಗಿದೆ ಎಂದು ತಾಲೂಕು ಕಚೇರಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News