×
Ad

ದ.ಕ.ಜಿಲ್ಲೆ: ಮುಂಗಾರು ಮಳೆ ಪ್ರಮಾಣದಲ್ಲಿ ಕುಸಿತ

Update: 2019-08-05 21:06 IST

ಮಂಗಳೂರು, ಆ.5: ಈ ಬಾರಿ ಕರಾವಳಿಯಲ್ಲಿ ಮುಂಗಾರು ಮಳೆ ಪ್ರಮಾಣದಲ್ಲಿ ಕುಸಿತ ಕಂಡಿವೆ. ಜೊತೆಗೆ ವಿಳಂಬವೂ ಆಗಿದೆ. ಆ ಹಿನ್ನೆಲೆಯಲ್ಲಿ ಭತ್ತ ಕೃಷಿ ಚಟುವಟಿಕೆಗೆ ಹೊಡೆತ ಬಿದ್ದಿವೆ. ಇದ್ದ ಅಲ್ಪಸ್ವಲ್ಪ ಕೃಷಿ ಭೂಮಿಯಲ್ಲಿ ಕೃಷಿ ಚಟುವಟಿಕೆ ತಡವಾಗಿ ಆರಂಭವಾಗಿದ್ದು, ನಿಗದಿತ ಗುರಿ ಸಾಧನೆ ಈವರೆಗೆ ಆಗಿಲ್ಲ.

ಕಳೆದ ವರ್ಷ ಜನವರಿಯಿಂದ ಆಗಸ್ಟ್ 5ರವರೆಗೆ 3058.1 ಮಿ.ಮೀ ಮಳೆಯಾಗಿದ್ದರೆ, ಈ ಬಾರಿ ಅದರ ಅರ್ಧದಷ್ಟೂ ಆಗಿಲ್ಲ. ಅಂದರೆ ಈ ವರ್ಷ ಜನವರಿಯಿಂದ ಆಗಸ್ಟ್ 5ರವರೆಗೆ ಕೇವಲ 1588.4 ಮಿ.ಮೀ. ಮಳೆಯಾಗಿದೆ. ಮುಂಗಾರು ಮಳೆ ವಿಳಂಬ ಮಾತ್ರವಲ್ಲ, ಮಳೆ ಪ್ರಮಾಣದಲ್ಲೂ ಭಾರೀ ಕುಸಿತ ಕಂಡು ಬಂದ ಕಾರಣ ಒಟ್ಟು ಕೃಷಿ ಚಟುವಟಿಕೆಯಲ್ಲಿ ಹಿನ್ನಡೆಯಾಗಿದೆ.

ಸಾಮಾನ್ಯವಾಗಿ ಜೂನ್ ಅಂತ್ಯದ ವೇಳೆಗೆ ಮುಂಗಾರು ಮಳೆ ಚುರುಕುಗೊಂಡು ಗದ್ದೆಯಲ್ಲಿ ನೀರು ತುಂಬಿ ತುಳುಕುತ್ತಿವೆ. ಆ ಬಳಿಕವೇ ಕೃಷಿ ಚಟುವಟಿಕೆ ಅಂದರೆ ಉಳುಮೆ, ನಾಟಿ ಸಹಿತ ಭತ್ತ ಕೃಷಿ ಚಟುವಟಿಕೆ ನಡೆಸಲಾಗುತ್ತದೆ. ದ.ಕ. ಜಿಲ್ಲೆಯಲ್ಲಿ ಭತ್ತ ನಾಟಿ ಗುರಿಯಲ್ಲಿ ಈವರೆಗೆ ಶೇ.44 ಸಾಧನೆಯಾಗಿದೆ. ಅಂದರೆ ಜಿಲ್ಲೆಯ 16,900 ಹೆಕ್ಟೇರ್ ಪ್ರದೇಶದಲ್ಲಿ 7,144 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಲಾಗಿದೆ.

ಆಗಸ್ಟ್‌ನಲ್ಲೂ ಬಿತ್ತನೆ ಮತ್ತು ನಾಟಿ ನಡೆಯಲಿದ್ದು, ತಿಂಗಳಾಂತ್ಯದ ವೇಳೆಗೆ ನಿಗದಿತ ಗುರಿ ಸಾಧನೆಯ ನಿರೀಕ್ಷೆಯಿದೆ. ಕಳೆದ ವರ್ಷ ಮೇಯಲ್ಲೇ ಉತ್ತಮ ಮಳೆಯಾಗಿದ್ದರಿಂದ ಆಗಸ್ಟ್ ಮೊದಲ ವಾರದಲ್ಲೇ ನಿಗದಿತ ಗುರಿ ಸಾಧಿಸಲಾಗಿತ್ತು. ಆದರೆ ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿಯ ಭತ್ತದ ಬೆಳೆಯ ಗುರಿ ಭಾರೀ ಕಡಿಮೆಯಿದೆ. ಅಂದರೆ ದ.ಕ. ಜಿಲ್ಲೆಯಲ್ಲಿ 28 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯುವ ಗುರಿ ನಿಗದಿಪಡಿಸಿತ್ತು. ಆದರೆ ಸಮೀಕ್ಷೆ ಪ್ರಕಾರ ಜಿಲ್ಲೆಯಲ್ಲಿ ಕೆವಲ 15,900 ಹೆಕ್ಟೇರ್ ಭತ್ತ ಬೆಳೆಯುವ ಪ್ರದೇಶ ಪತ್ತೆಯಾಗಿತ್ತು. ಆದ್ದರಿಂದ ಈ ಬಾರಿ ಗುರಿಯೂ ಕಡಿಮೆಯಾಗಿದೆ ಎಂದು ಅಧಿಕಾರಿಗಳು ವಿಶ್ಲೇಷಿಸುತ್ತಾರೆ.

ಕರಾವಳಿಯಲ್ಲಿ ಈ ಬಾರಿ ಮುಂಗಾರು ಮಳೆ ಭಾರೀ ಇಳಿಕೆಯಾಗಿದೆ. ಅಂದರೆ ಜಿಲ್ಲೆಯಲ್ಲಿ ಜೂನ್‌ನ ಸರಾಸರಿ ಮಳೆ 914.8 ಮಿ.ಮೀ.ನಲ್ಲಿ ಕೇವಲ 439.4 ಮಿ.ಮೀ. ಸುರಿದಿದೆ. ಜುಲೈಯ ಸರಾಸರಿ ಮಳೆ 1217 ಮಿ.ಮೀ. ಆಗಿದ್ದರೆ ಸುರಿದ ಮಳೆ 981.3 ಮಿ.ಮೀ. ಆಗಿದೆ.
ಮುಂಗಾರು ಪೂರ್ವ ಮಳೆಯೂ ಕಡಿಮೆಯಾಗಿದ್ದರಿಂದ ಉಳುಮೆಯೊಂದಿಗೆ ಗದ್ದೆ ಹದ ಮಾಡುವುದು ಕೂಡ ರೈತರಿಗೆ ಸಮಸ್ಯೆಯಾಗಿ ಕಾಡಿತು. ಮಳೆಯ ಪ್ರಮಾಣವು ಮತ್ತೆಯೂ ಕಡಿಮೆಯಾದ ಪರಿಣಾಮ ಕೃಷಿ ಚಟಿವಟಿಕೆಗೆ ಹೊಡೆತ ಬಿದ್ದಿವೆ.

ಮಳೆ ಪ್ರಮಾಣ ಕಡಿಮೆಯಾದ ಕಾರಣ ಮುಂಗಾರಿನ ಬಿತ್ತನೆ, ನಾಟಿ ಕೆಲಸವೂ ತಡವಾಗಿದೆ. ಇದರ ನೇರ ಪರಿಣಾಮ ಹಿಂಗಾರಿನ ಮೇಲೆ ಆಗಲಿದೆ. ಅಂದರೆ ಹಿಂಗಾರು ವೇಳೆ ಭತ್ತ ಕೃಷಿ ಕಷ್ಟವಾಗಲಿದೆ ಎಂದು ರೈತರು ಅಭಿಪ್ರಾಯಪಡುತ್ತಾರೆ. ಜಿಲ್ಲೆಯ ಹಲವು ಕಡೆ ಇನ್ನೂ ಕೃಷಿ ಚಟುವಟಿಕೆ ಪೂರ್ತಿಗೊಂಡಿಲ್ಲ. ಕನಿಷ್ಠ 25 ದಿನ ನೇಜಿ ನಾಟಿ ಮಾಡಿದರೆ ಮಾತ್ರ ನಿಗದಿತ ಅವಧಿಯಲ್ಲಿ ಬೆಳೆ ತೆಗೆಯಲು ಸಾಧ್ಯವಿದೆ. ಇದೀಗ ಬಿತ್ತನೆ ಮಾಡಿದರೆ ಹೆಚ್ಚೇನೂ ಪ್ರಯೋಜನವಿಲ್ಲ. ಸೋಮವಾರದಿಂದ ಮಳೆ ಸ್ವಲ್ಪ ಚುರುಕು ಕಂಡಿದೆ. ಅಂದರೆ ಕಳೆದ ವರ್ಷ ಆ.5ರಂದು ಜಿಲ್ಲೆಯಲ್ಲಿ ಕೇವಲ 12 ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ 57.7 ಮಿ.ಮೀ. ಮಳೆಯಾಗಿದೆ. ಇದು ಭತ್ತ ಹೊರತುಪಡಿಸಿ ಇತರ ಕೃಷಿ ಚಟುವಟಿಕೆಗೆ ಅಪಾಯಕಾರಿಯಾಗಿ ಪರಿಣಮಿಸುವ ಸಾಧ್ಯತೆ ಇದೆ.

ಮಳೆ ವಿಳಂಬವಾದ ಕಾರಣ ಭತ್ತ ಕೃಷಿ ಚಟುವಟಿಕೆಯೂ ವಿಳಂಬವಾಗಿದೆ. ಇದೀಗ ಬಿತ್ತನೆ, ಉಳುಮೆ ಕೆಲಸಗಳು ಚುರುಕುಗೊಂಡಿವೆ. ಸೋಮವಾರದಿಂದ ಭಾರೀ ಮಳೆಯಾಗಿದ್ದು, ನೀರು ಹರಿಯುತ್ತಿದೆ. ಗದ್ದೆಯಲ್ಲೂ ನೀರು ನಿಂತಿದೆ.

- ಡಾ.ಸೀತಾ, ಜಂಟಿ ನಿರ್ದೇಶಕಿ ದ.ಕ. ಜಿಲ್ಲಾ ಕೃಷಿ ಇಲಾಖೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News