ಆ್ಯಶಸ್ ಮೊದಲ ಟೆಸ್ಟ್: ಆಸ್ಟ್ರೇಲಿಯಕ್ಕೆ 251 ರನ್‌ಗಳ ಭರ್ಜರಿ ಜಯ
ಎಡ್ಜ್‌ಬ್ಯಾಸ್ಟನ್, ಆ.5: ಆ್ಯಶಸ್ ಸರಣಿಯ ಮೊದಲ ಟೆಸ್ಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯ 251 ರನ್‌ಗಳ ಭರ್ಜರಿ ಜಯ ಗಳಿಸಿದೆ.
ಟೆಸ್ಟ್‌ನ ಐದನೇ ಹಾಗೂ ಅಂತಿಮ ದಿನವಾಗಿರುವ ಸೋಮವಾರ ಗೆಲುವಿಗೆ ಎರಡನೇ ಇನಿಂಗ್ಸ್‌ನಲ್ಲಿ ಗೆಲುವಿಗೆ 398 ರನ್‌ಗಳ ಸವಾಲನ್ನು ಪಡೆದ ಇಂಗ್ಲೆಂಡ್ ನಥಾನ್ ಲಿಯೊನ್(49ಕ್ಕೆ 6) ಮತ್ತು ಪ್ಯಾಟ್ ಕಮಿನ್ಸ್ (32ಕ್ಕೆ 4) ದಾಳಿಗೆ ಸಿಲುಕಿ 52.3 ಓವರ್‌ಗಳಲ್ಲಿ 146ಕ್ಕೆ ಆಲೌಟಾಗಿದೆ. ಎರಡೂ ಇನಿಂಗ್ಸ್‌ಗಳಲ್ಲೂ ಭರ್ಜರಿ ಶತಕ ದಾಖಲಿಸಿದ ಮಾಜಿ ನಾಯಕ ಸ್ಟೀವ್ ಸ್ಮಿತ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದಾರೆ
ಕ್ರಿಸ್ ವೋಕ್ಸ್37 ರನ್ ಗಳಿಸಿರುವುದು ತಂಡದ ಪರ ಎರಡನೇ ಇನಿಂಗ್ಸ್‌ನಲ್ಲಿ ದಾಖಲಾದ ಗರಿಷ್ಠ ವೈಯಕ್ತಿಕ ಸ್ಕೋರ್. ಆಸ್ಟ್ರೇಲಿಯ ರವಿವಾರ ನಾಲ್ಕನೇ ದಿನದಾಟದಂತ್ಯಕ್ಕೆ 112 ಓವರ್‌ಗಳಲ್ಲಿ 7 ವಿಕೆಟ್ ನಷ್ಟದಲ್ಲಿ 487 ರನ್ ಗಳಿಸುವ ಮೂಲಕ ಡಿಕ್ಲೇರ್ ಮಾಡಿಕೊಂಡಿತ್ತು. ಬಳಿಕ ಎರಡನೇ ಇನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ ದಿನದಾಟದಂತ್ಯಕ್ಕೆ 7 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 13 ರನ್ ಗಳಿಸಿತ್ತು.
ರಾರಿ ಬರ್ಮ್ಸ್ 7 ರನ್ ಮತ್ತು ಜಾಸನ್ ರಾಯ್ 6 ರನ್ ಗಳಿಸಿ ಕ್ರೀಸ್‌ನಲ್ಲಿದ್ದರು. ಇಂದು ಆಟ ಮುಂದುವರಿಸಿದ ಇವರು ತಂಡದ ಸ್ಕೋರ್‌ನ್ನು ಮೊದಲ ವಿಕೆಟ್‌ಗೆ 19ಕ್ಕೆ ತಲುಪಿಸುವಲ್ಲಿ ಶಕ್ತರಾದರು.
9.5ನೇ ಓವರ್‌ನಲ್ಲಿ ಬಮ್ಸ್ (11) ಅವರು ಕಮಿನ್ಸ್ ಎಸೆತದಲ್ಲಿ ಲಿಯೊನ್‌ಗೆ ಕ್ಯಾಚ್ ನೀಡುವುದರೊಂದಿಗೆ ಮೊದಲ ವಿಕೆಟ್ ಪತನಗೊಂಡಿತು. ಜಾಸನ್ ರಾಯ್ ಮತ್ತು ನಾಯಕ ಜೋ ರೂಟ್ ತಂಡವನ್ನು ಆಧರಿಸಲು ಯತ್ನಿಸಿದರು. ಆದರೆ ಸ್ಕೋರ್ 60ಕ್ಕೆ ತಲುಪುವಾಗ ಲಿನ್ ಎಸೆತದಲ್ಲಿ ರಾಯ್ (28) ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು.
ಜೋ ಡೆನ್ಲೇ (11) ಎರಡಂಕೆಯ ಕೊಡುಗೆ ನೀಡಿ ನಿರ್ಗಮಿಸಿದರು. ಆಗ ತಂಡದ ಸ್ಕೋರ್ 25.5 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 80 ರನ್. ಜೋ ರೂಟ್ 28 ರನ್ ಗಳಿಸಿ ಲಿನ್‌ಗೆ ವಿಕೆಟ್ ಒಪ್ಪಿಸಿದರು. ಬಳಿಕ ಇಂಗ್ಲೆಂಡ್ ಬ್ಯಾಟ್ಸ್‌ಮನ್‌ಗಳ ಪೆವಿಲಿಯನ್ ಪರೇಡ್ ಆರಂಭಗೊಂಡಿತು. ಜೋಸ್ ಬಟ್ಲರ್(1), ಬೆನ್ ಸ್ಟೋಕ್ಸ್(6), ಜೋನಿ ಬೈರ್‌ಸ್ಟೋವ್(6), ಸ್ಟುವರ್ಟ್ ಬ್ರಾಡ್(0) , ಮೊಯಿನ್ ಅಲಿ(4) ಬೇಗನೆ ನಿರ್ಗಮಿಸಿದರು. ಕೊನೆಯಲ್ಲಿ ಕ್ರಿಸ್ ವೋಕ್ಸ್ ಹೋರಾಟ ನಡೆಸಿ 54 ಎಸೆತಗಳಲ್ಲಿ 7 ಬೌಂಡರಿಗಳ ಸಹಾಯದಿಂದ 37 ರನ್ ಸೇರಿಸಿದರು. ಅವರು ಪ್ಯಾಟ್ ಕಮಿನ್ಸ್ ಎಸೆತದಲ್ಲಿ ಸ್ಟೀವನ್ ಸ್ಮಿತ್‌ಗೆ ಕ್ಯಾಚ್ ನೀಡುವುದರೊಂದಿಗೆ ಇಂಗ್ಲೆಂಡ್‌ನ ಎರಡನೇ ಇನಿಂಗ್ಸ್ ಕೊನೆಗೊಂಡಿತು. ಜೇಮ್ಸ್ ಆ್ಯಂಡರ್ಸನ್ ಔಟಾಗದೆ 4 ರನ್ ಗಳಿಸಿದರು.
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯ ಮೊದಲ ಇನಿಂಗ್ಸ್ 284 ಇಂಗ್ಲೆಂಡ್ ಮೊದಲ ಇನಿಂಗ್ಸ್ 374
ಆಸ್ಟ್ರೇಲಿಯ ಎರಡನೇ ಇನಿಂಗ್ಸ್ 487 /7 ( ಸ್ಮಿತ್ 142, ವೇಡ್ 110, ಹೆಡ್ 51; ಸ್ಟೋಕ್ಸ್ 85ಕ್ಕೆ 3)
ಇಂಗ್ಲೆಂಡ್ ಎರಡನೇ ಇನಿಂಗ್ಸ್ 52.3 ಓವರ್‌ಗಳಲ್ಲಿ ಆಲೌಟ್ 146( ವೋಕ್ಸ್ 37; ಲಿಯೊನ್ 49ಕ್ಕೆ 6, ಕಮಿನ್ಸ್ 32ಕ್ಕೆ 4)
ಪಂದ್ಯ ಶ್ರೇಷ್ಠ: ಸ್ಟೀವ್ ಸ್ಮಿತ್