ಮಗಳ ವೇಷದಲ್ಲಿ ಜೈಲಿನಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಸಿಕ್ಕಿ ಬಿದ್ದ!

Update: 2019-08-05 16:00 GMT

ರಿಯೋ ಡಿ ಜನೈರೊ (ಬ್ರೆಝಿಲ್), ಆ. 5: ತನ್ನನ್ನು ಭೇಟಿಯಾಗಲು ಬಂದ ಮಗಳನ್ನು ಜೈಲಿನಲ್ಲಿ ಕುಳ್ಳಿರಿಸಿ, ಅವಳ ವೇಷ ಧರಿಸಿ ಜೈಲಿನಿಂದ ಪರಾರಿಯಾಗುವ ಬ್ರೆಝಿಲ್‌ನ ಅಪರಾಧಿ ತಂಡದ ನಾಯಕನೊಬ್ಬನ ಪ್ರಯತ್ನವನ್ನು ಜೈಲು ಅಧಿಕಾರಿಗಳು ವಿಫಲಗೊಳಿಸಿದ್ದಾರೆ.

ತನ್ನ 19 ವರ್ಷದ ಮಗಳ ವೇಷ ಧರಿಸಿ ರಿಯೋ ಡಿ ಜನೈರೋದ ಜೈಲಿನ ಪ್ರಧಾನ ದ್ವಾರದಿಂದ ಶನಿವಾರ ಪರಾರಿಯಾಗಲು ಕ್ಲಾವಿನೊ ಡ ಸಿಲ್ವ ನಡೆಸಿದ ಪ್ರಯತ್ನದ ವೀಡಿಯೊ ಜಗತ್ತಿನಾದ್ಯಂತ ವೈರಲ್ ಆಗಿದೆ.

 ತನ್ನನ್ನು ಭೇಟಿಯಾಗಲು ಬಂದ ಮಗಳನ್ನು ಜೈಲಿನಲ್ಲಿ ತನ್ನ ಸ್ಥಾನದಲ್ಲಿ ಕುಳ್ಳಿರಿಸಿದ ಆತ, ವಿಗ್, ಸಿಲಿಕಾನ್ ಮುಖವಾಡ ಮತ್ತು ಗುಲಾಬಿ ಬಣ್ಣದ ಟಿ-ಶರ್ಟ್ ಧರಿಸಿ ಜೈಲಿನ ದ್ವಾರದತ್ತ ನಡೆದುಕೊಂಡು ಬಂದ. ಆದರೆ, ಅಧಿಕಾರಿಗಳನ್ನು ವಂಚಿಸಲು ನಡೆಸಿದ ಅವನ ಯಾವುದೇ ತಂತ್ರ ಫಲ ನೀಡಲಿಲ್ಲ. ತಪ್ಪಿಸಿಕೊಳ್ಳುವ ವೇಳೆ ಅವನು ಗಾಬರಿಯಾಗಿದ್ದ ಹಾಗೂ ಅದರಿಂದಾಗಿಯೇ ಅವನು ಸಿಕ್ಕಿ ಬಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.

ಡ ಸಿಲ್ವ ತನ್ನ ವಿಗ್, ಸಿಲಿಕಾನ್ ಮುಖವಾಡ ಮತ್ತು ಬಟ್ಟೆಗಳನ್ನು ಬಿಚ್ಚುವ ದೃಶ್ಯಗಳನ್ನು ರಿಯೋದ ಬಂದೀಖಾನೆ ಇಲಾಖೆ ಬಿಡುಗಡೆಗೊಳಿಸಿದೆ.

ಅವನು ಬ್ರೆಝಿಲ್‌ನ ಅತ್ಯಂತ ಪ್ರಬಲ ಕ್ರಿಮಿನಲ್ ಗುಂಪುಗಳಲ್ಲಿ ಒಂದಾದ ರೆಡ್ ಕಮಾಂಡ್‌ನ ಸದಸ್ಯನಾಗಿದ್ದಾನೆ. ಅವನನ್ನು ಈಗ ಗರಿಷ್ಠ ಭದ್ರತೆಯ ಜೈಲೊಂದಕ್ಕೆ ಸ್ಥಳಾಂತರಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News