ಡಾ. ಜಾವೀದ್ ಜಮೀಲ್‌ರ ‘ಇಕಾನಾಮಿಕ್ಸ್ ಫಸ್ಟ್ ಆರ್ ಹೆಲ್ತ್ ಫಸ್ಟ್’ ಪುಸ್ತಕ ಲೋಕಾರ್ಪಣೆ

Update: 2019-08-05 16:29 GMT

 ಉಳ್ಳಾಲ, ಆ. 5: ಗ್ರಾಹಕರ ತರ್ಕಕ್ಕಿಂತ, ಬಳಕೆದಾರರ ತರ್ಕವು ವಿಭಿನ್ನವಾಗಿರುತ್ತದೆ. ಜನರ ಯೋಗ್ಯ ಮತ್ತು ಆರಾಮದಾಯಕ ಜೀವನಕ್ಕಾಗಿ ಮಾನವ ಸಂಪನ್ಮೂಲಗಳ ಸಂಪತ್ತಿನ ಉತ್ತೇಜನವಾಗಬೇಕಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಡಾ. ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಅಭಿಪ್ರಾಯಪಟ್ಟರು.

ಡಾ. ಜಾವೀದ್ ಜಮೀಲ್ ಅವರ ‘ಇಕಾನಾಮಿಕ್ಸ್ ಫಸ್ಟ್ ಆರ್ ಹೆಲ್ತ್ ಫಸ್ಟ್’ ಎಂಬ ಪುಸ್ತಕವನ್ನು ದೇರಳಕಟ್ಟೆಯ ಯೆನೆಪೊಯ ಪರಿಗಣಿಸಲ್ಪಟ್ಟ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳಿಸಿ ಅವರು ಮಾತನಾಡುತ್ತಿದ್ದರು.

ಮಾನವ ಅಭಿವೃದ್ಧಿಯೇ, ಮಾನವ ಸಂಪನ್ಮೂಲ. ಮದ್ಯಪಾನ ಆರೋಗ್ಯ ವಿಪತ್ತು ಹಾಗೂ ದೀರ್ಘಾವಧಿಯ ಸಾಮಾಜಿಕ ಪಿಡುಗುಗಳ ಕುರಿತು ‘ಇಕಾನಾಮಿಕ್ಸ್ ಫಸ್ಟ್ ಆರ್ ಹೆಲ್ತ್ ಫಸ್ಟ್’ ಬೆಳಕು ಚೆಲ್ಲಿದೆ ಎಂದರು.

ಲೇಖಕ, ಯೆನೆಪೊಯ ವಿವಿಯ ಇಸ್ಲಾಮಿಕ್ ಅಧ್ಯಯನಗಳು ಹಾಗೂ ಸಂಶೋಧನ ವಿಭಾಗದ ಮುಖ್ಯಸ್ಥ ಡಾ. ಜಾವೀದ್ ಜಮೀಲ್ ಮಾತನಾಡಿ, ಆರ್ಥಿಕ ಮೂಲಭೂತವಾದ ಹಿಂದೆ ಜಗತ್ತು ನಿಂತಿದೆ. ಭಾರತದಲ್ಲಿ ಶೇ.95 ರಷ್ಟು ಮಂದಿ ಧರ್ಮವನ್ನು ಅನುಸರಿಸುತ್ತಿರುವವರಾಗಿದ್ದಾರೆ. ಕುಟುಂಬ ವ್ಯವಸ್ಥೆಯಡಿ ಬಾಳುವ ಜನರೇ ಹೆಚ್ಚಿದ್ದಾರೆ. ಇಂತಹ ದೇಶದಲ್ಲಿ ಅದನ್ನು ಕೆಡಹುವ ಪ್ರಯತ್ನ ಕಾರ್ಪೊರೇಟ್ ವಲಯಗಳಿಂದ ಆಗಿದೆ ಎಂದರು.

ಜಗತ್ತಿನಾದ್ಯಂತ 5 ಮಿಲಿಯ ಜನರು ಮದ್ಯಪಾನ, 35 ಲಕ್ಷ ಮಂದಿ ಧೂಮಪಾನ, ಮದ್ಯವಸ್ಯನಿಗಳು ನಡೆಸುವ ಅಪರಾಧಗಳಿಂದ ಹಾಗೂ ಅಪಘಾತ ಪ್ರಕರಣಗಳಿಂದ 1 ಕೋಟಿ ಜನ ಬಲಿಯಾಗುತ್ತಿದ್ದಾರೆ. ಕಾರ್ಪೊರೇಟ್ ಜಗತ್ತು ಎಲ್ಲಾ ವ್ಯವಸ್ಥೆಗಳನ್ನು ನಿಯಂತ್ರಿಸುತ್ತಿರುವುದೇ ಜನ ಸಾಮಾನ್ಯರು ತೊಂದರೆಗೆ ಸಿಲುಕಲು ಕಾರಣ ಎಂದು ಅಭಿಪ್ರಾಯಿಸಿದರು.

ಆವಶ್ಯಕ ವ್ಯವಸ್ಥೆಗಳನ್ನು ಕೈಗಾರಿಕೀಕರಣಗೊಳಿಸಿರುವುದರಿಂದ ಜೀವನದ ಆರೋಗ್ಯವನ್ನೇ ಕಳೆದುಕೊಳ್ಳುವಂತಾಗಿದೆ. ಆರ್ಥಿಕತೆ ಎಂಬ ಮರವನ್ನು ಏಕಸ್ವಾಮ್ಯದ ಸೊತ್ತಿನಂತೆ ರೂಪಿಸಲಾಗಿದೆ. ದೇಶದ ಪ್ರಜಾಪ್ರಭುತ್ವವನ್ನು ಕಾರ್ಪೊರೇಟ್ ವಲಯ ಆಳುತ್ತಿದೆ. ಕಾರ್ಪೊರೇಟ್ ಏಜೆಂಟರುಗಳು ಜನರಿಂದ ಜನರಿಗಾಗಿ, ಜನರಿಗೆ ಅನ್ನುವ ನೀತಿಯನ್ನು ಅನುಸರಿಸುವ ಮಟ್ಟಕ್ಕೆ ದೇಶದ ಸ್ಥಿತಿ ತಲುಪಿದೆ. ಈ ದೇಶ ಶಾಂತಿ, ನೆಮ್ಮದಿ, ಅಭಿವೃದ್ಧಿಯತ್ತ ಸಾಗುತ್ತಿದೆ ಅನ್ನುವ ಸುಳ್ಳು ಪ್ರಚಾರವನ್ನು ಮಾಡಲಾಗುತ್ತಿದೆ. ಜನರಿಗಿರುವ ಆಯ್ಕೆ ಸ್ವಾತಂತ್ರವನ್ನು ಕೈಗಾರಿಕಾ ಸಾಮರ್ಥ್ಯಗಳು ದುರ್ಬಳಕೆ ಮಾಡುವುದರ ಮೂಲಕ ಜನರ ಧ್ವನಿಯನ್ನು ವ್ಯಾಪಾರೀಕರಣಗೊಳಿಸಿದೆ ಎಂದು ಡಾ.ಜಾವೀದ್ ಜಮೀಲ್ ಖೇದ ವ್ಯಕ್ತಪಡಿಸಿದರು.

ಯೆನೆಪೊಯ ವಿವಿ ಕುಲಾಧಿಪತಿ ವೈ. ಅಬ್ದುಲ್ಲಾ ಕುಂಞಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಉಪಕುಲಪತಿ ಡಾ. ಸಿ.ವಿ.ರಘುವೀರ್, ಕಣ್ಣೂರು ಹಾಗೂ ಕ್ಯಾಲಿಕಟ್ ವಿಶ್ವವಿದ್ಯಾನಿಲಯದ ವಿಶ್ರಾಂತ ಉಪಕುಲಪತಿ ಎಂ. ಅಬ್ದುರ್ರಹ್ಮಾನ್, ರುವಾಂಡೋ ದೇಶದ ಅರ್ನಸ್ಟ್ ರ್ವಾ ಮುಖ್ಯ ಅತಿಥಿಗಳಾಗಿದ್ದರು. 

ಯೆನೆಪೊಯ ವಿ.ವಿ ಉಪಕುಲಪತಿ ಡಾ. ಎಂ.ವಿಜಯಕುಮಾರ್ ಸ್ವಾಗತಿಸಿದರು. ಡಾ. ಪ್ರಚೇತ್ ಕಾರ್ಯಕ್ರಮ ನಿರೂಪಿಸಿದರು. ಡಾ.ಗಂಗಾಧರ್ ಸೋಮಯಾಜಿ ಕೆ.ಎಸ್. ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News