ಮಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಡಾ.ಪಿ.ಎಸ್.ಹರ್ಷ ನೇಮಕ
ಮಂಗಳೂರು, ಆ. 5: ಮಂಗಳೂರು ನಗರ ನೂತನ ಪೊಲೀಸ್ ಆಯುಕ್ತರಾಗಿ ಡಾ. ಹರ್ಷ ಪಿ.ಎಸ್. ಅವರನ್ನು ನೇಮಕಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
ಈ ಹಿಂದೆ ಕಮಿಷನರ್ ಆಗಿದ್ದ ಸಂದೀಪ್ ಪಾಟೀಲ್ ಅವರನ್ನು ಬೆಂಗಳೂರು ಅಪರಾಧ ವಿಭಾಗದ ಜಂಟಿ ಆಯುಕ್ತರಾಗಿ ವರ್ಗ ಮಾಡಿ ಡಾ. ಸುಬ್ರಹ್ಮಣ್ಯೇಶ್ವರ ರಾವ್ ಅವರನ್ನು ನೇಮಿಸಿತ್ತು. ಆದರೆ ಸೋಮವಾರ ಹೊರಡಿಸಿದ ಹೊಸ ಆದೇಶದಲ್ಲಿ ಡಾ. ಹರ್ಷ ಅವರನ್ನು ಆಯುಕ್ತರನ್ನಾಗಿ ನೇಮಕಗೊಳಿಸಿದೆ.
2004ರ ಐಪಿಎಸ್ ಬ್ಯಾಚ್‌ನವರಾಗಿರುವ ಇವರು ಕರ್ನಾಟಕ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದಲ್ಲಿ ನಿರ್ದೇಶಕರಾಗಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಆಯುಕ್ತರಾಗಿ, ಕಾರಾಗೃಹ ಇಲಾಖೆ ಡಿಐಜಿ, ಕೆಎಸ್ಸಾರ್ಟಿಸಿಯ ನಿರ್ದೇಶಕ (ವಿಜಿಲೆನ್ಸ್ ಮತ್ತು ಸೆಕ್ಯೂರಿಟಿ) ಮುಂತಾದ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದಾರೆ.
ಈ ಹಿಂದೆ ಪುತ್ತೂರಿನಲ್ಲಿ ಎಎಸ್ಪಿಯಾಗಿ ಕರ್ತವ್ಯ ನಿರ್ವಹಿಸಿದ್ದ ಸಂದರ್ಭ ಪುತ್ತೂರು ದೇವಸ್ಥಾನ ಎದುರು ನಡೆದ ಶನಿಪೂಜೆ ವಿವಾದದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಶ್ರಮಿಸಿದ್ದರು. ಇದು ಮಾತ್ರವಲ್ಲದೆ, ಈ ವ್ಯಾಪ್ತಿಯಲ್ಲಿ ಗೂಂಡಾಗಿರಿ ಮಟ್ಟ ಹಾಕುವಲ್ಲಿ ಕಠಿಣ ಕ್ರಮ ಕೈಗೊಂಡಿದ್ದರು.
ನೂತನ ಡಿಸಿಪಿ ಅರುಣಾಂಶ್ ಗಿರಿ
ನಗರದ ಕಾನೂನು ಸುವ್ಯವಸ್ಥೆ ವಿಭಾಗದ ನೂತನ ಪೊಲೀಸ್ ಉಪ ಆಯುಕ್ತರಾಗಿ (ಕಾನೂನು ಸುವ್ಯವಸ್ಥೆ) ಹುದ್ದೆಗೆ ಡಾ.ಅರುಣಾಂಶ್ ಗಿರಿ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ಡಿಸಿಪಿಯಾಗಿರುವ ಹನುಮಂತರಾಯ ಅವರನ್ನು ದಾವಣಗೆರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ನೇಮಕಗೊಳಿಸಿ ಸರಕಾರ ಜು.1ರಂದು ಆದೇಶ ಹೊರಡಿಸಿತ್ತು. ಅರುಣಾಂಶ್ ಈ ಮೊದಲು ಕಾರ್ಕಳದ ನಕ್ಸಲ್ ನಿಗ್ರಹ ದಳದಲ್ಲಿ ಎಸ್‌ಪಿ ಆಗಿದ್ದರು.