ಆ.6: ಕುವೈತ್‌ನಲ್ಲಿ ಉದ್ಯೋಗ ವಂಚಿತರು ಮಂಗಳೂರಿಗೆ
ಮಂಗಳೂರು, ಆ.5: ಕುವೈತ್‌ನಲ್ಲಿ ಉದ್ಯೋಗ ವಂಚಿತರಾಗಿ ಅತಂತ್ರ ಸ್ಥಿತಿಯಲ್ಲಿದ್ದ 34 ಮಂದಿ ಭಾರತೀಯ ನೌಕರರ ಪೈಕಿ ಕೊನೆಯಲ್ಲಿ ಉಳಿದುಕೊಂಡ 11 ಮಂದಿ ರವಿವಾರ ಕುವೈತ್‌ನಿಂದ ತಾಯ್ನಿಡಿಗೆ ವಿಮಾನದಲ್ಲಿ ಹೊರಟಿದ್ದಾರೆ. ಇವರೆಲ್ಲ ಸೋಮವಾರ ಮುಂಬೈಗೆ ಆಗಮಿಸಿದ್ದು, ಇವರಲ್ಲಿ 8 ಮಂದಿ ಬಸ್ ಮೂಲಕ ಮಂಗಳವಾರ ಮಂಗಳೂರಿಗೆ ಆಗಮಿಸಲಿದ್ದಾರೆ.
ಕುವೈತ್‌ನಲ್ಲಿ ಉದ್ಯೋಗ ವಂಚನೆಗೊಂಡು ಅತಂತ್ರ ಸ್ಥಿತಿಯಲ್ಲಿದ್ದ ಪೈಕಿ ಇತರ 23 ಮಂದಿ ಹಂತ ಹಂತಗಳಲ್ಲಿ ಅನಿವಾಸಿ ಭಾರತೀಯರ ನೆರವಿನಲ್ಲಿ ಸ್ವದೇಶಕ್ಕೆ ವಾಪಸಾಗಿದ್ದರು. ಆದರೆ ಉದ್ಯೋಗ ನೀಡಿದ ಕಂಪೆನಿಯು ಸೊತ್ತುಗಳನ್ನು ಮರಳಿಸದ ಆರೋಪದಲ್ಲಿ ವೀಸಾ ರದ್ದತಿ ಹಾಗೂ ಪಾಸ್‌ಪೋರ್ಟ್ ಮರಳಿಸಲು ನಿರಾಕರಿಸಿತ್ತು. ಕೊನೆಗೂ ಭಾರತೀಯ ರಾಯಭಾರಿ ಕಚೇರಿ ಹಾಗೂ ಅನಿವಾಸಿ ಭಾರತೀಯ ಉದ್ಯಮಿಗಳ ಪ್ರಯತ್ನದ ಫಲವಾಗಿ ಬಾಕಿಯುಳಿದ 11 ಮಂದಿ ತಾಯ್ನೋಡಿಗೆ ಮರಳುವಂತಾಗಿದೆ.
11 ಮಂದಿ ಪೈಕಿ 8 ಮಂದಿಯ ದಂಡ ಹಾಗೂ ಟಿಕೆಟ್ ಮೊತ್ತವನ್ನು ಕುವೈತ್‌ನ ಭಾರತೀಯ ಪ್ರವಾಸಿ ಪರಿಷತ್ ಹಾಗೂ ಕೇರಳ ಮುಸ್ಲಿಂ ಅಸೋಸಿಯೇಷನ್ ಭರಿಸಿದೆ. ಉಳಿದ ಮೂರು ಮಂದಿ ತಮಿಳ್ನಾಡಿನವರಾಗಿದ್ದು, ಅವರ ದಂಡ ಹಾಗೂ ಟಿಕೆಟ್ ವೆಚ್ಚವನ್ನು ಉದ್ಯಮಿ ಇಳಂಗೋವನ್ ಪಾವತಿಸಿದ್ದರು. ಇವರೆಲ್ಲರು ರವಿವಾರ ರಾತ್ರಿ 8:30ಕ್ಕೆ ಕುವೈತ್‌ನಿಂದ ವಿಮಾನ ಮೂಲಕ ಮರುದಿನ ಮುಂಬೈಗೆ ಆಗಮಿಸಿದರು. ಇವರಲ್ಲಿ ಮಂಗಳೂರಿನ 8 ಮಂದಿ ಮುಂಬೈನಿಂದ ಬಸ್ ಮೂಲಕ ಮಂಗಳೂರಿಗೆ ಆಗಮಿಸಲಿದ್ದಾರೆ ಎಂದು ಅನಿವಾಸಿ ಭಾರತೀಯ ಇಂಜಿನಿಯರ್ ಮೋಹನದಾಸ್ ಕಾಮತ್ ತಿಳಿಸಿದ್ದಾರೆ.