ಜಮ್ಮು-ಕಾಶ್ಮೀರ ವಿಶೇಷ ಸ್ಥಾನಮಾನ ರದ್ದು: ಬಿಜೆಪಿ ದ.ಕ. ಜಿಲ್ಲಾ ಕಚೇರಿಯಲ್ಲಿ ಸಂಭ್ರಮಾಚರಣೆ
ಮಂಗಳೂರು, ಆ.5 ಜಮ್ಮು ಮತ್ತು ಕಾಶ್ಮೀರಕ್ಕೆ ಪ್ರತ್ಯೇಕ ಸ್ಥಾನಮಾನ ನೀಡಿದ್ದ ಸಂವಿಧಾನದ 370ನೇ ವಿಧಿ ರದ್ದುಪಡಿಸಿದ ನರೇಂದ್ರ ಮೋದಿ ನೇತೃತ್ವದ ಕೇಂದ್ರದ ಬಿಜೆಪಿ ಸರಕಾರದ ಕ್ರಮವನ್ನು ಸ್ವಾಗತಿಸಿ, ಬಿಜೆಪಿಯಿಂದ ನಗರದ ಬಿಜೆಪಿ ಜಿಲ್ಲಾ ಕಚೇರಿ ಮುಂಭಾಗ ಸೋಮವಾರ ಸಂಜೆ ಸಂಭ್ರಮಾಚರಣೆ ನಡೆಸಲಾಯಿತು.
ಈ ಸಂದರ್ಭ ಮಾತನಾಡಿದ ವಿಧಾನಸಭೆ ಮಾಜಿ ಉಪಸ್ಪೀಕರ್ ಎನ್.ಯೋಗೀಶ್ ಭಟ್, ದೇಶದಲ್ಲಿ ಎರಡು ಧ್ವಜ, ಎರಡು ಕಾನೂನು ಇರಬಾರದು ಎನ್ನುವುದು ಬಿಜೆಪಿಯ ನಿಲುವಾಗಿತ್ತು. ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರತ್ಯೇಕ ಕಾನೂನು ಮೂಲಕ ದೇಶದಿಂದ ಪ್ರತ್ಯೇಕ ಎಂಬ ನಿಲುವನ್ನು ಅಲ್ಲಿನ ಪ್ರತ್ಯೇಕತಾವಾದಿಗಳು ಹೊಂದಿದ್ದರು. ಇದೀಗ ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಮೂಲಕ ಕಾಶ್ಮೀರ ಭಾರತದ ಅವಿಭಾಜ್ಯ ಅಂಗ ಎಂಬ ಐತಿಹಾಸಿಕ ನಿರ್ಧಾರವನ್ನು ಮೋದಿ ಸರಕಾರ ಕೈಗೊಂಡಿದೆ ಎಂದರು.
ಶಾಸಕ ಡಾ.ವೈ. ಭರತ್ ಶೆಟ್ಟಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರವಿಶಂಕರ ಮಿಜಾರ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಿಶೋರ್ ರೈ, ಪ್ರಮುಖರಾದ ಮೋನಪ್ಪ ಭಂಡಾರಿ, ರವಿಚಂದ್ರ, ಪ್ರಭಾಮಾಲಿನಿ, ರಾಜಗೋಪಾಲ ರೈ, ಭಾಸ್ಕರಚಂದ್ರ ಶೆಟ್ಟಿ, ವಿನಯ್ ಎಲ್. ಶೆಟ್ಟಿ, ಸುಧೀರ್ ಶೆಟ್ಟಿ ಕಣ್ಣೂರು, ರಮೇಶ್ ಕಂಡೆಟ್ಟು, ರಾಮ ಅಮೀನ್ ಪಚ್ಚನಾಡಿ ಭಾಗವಹಿಸಿದ್ದರು.
ವಿಎಚ್‌ಪಿ ಬಜರಂಗದಳ ಸಂಭ್ರಮ
ಸಂವಿಧಾನದ 370ನೇ ವಿಧಿ ರದ್ದತಿ ಹಿನ್ನೆಲೆಯಲ್ಲಿ ವಿಶ್ವಹಿಂದು ಪರಿಷತ್, ಬಜರಂಗದಳ ವತಿಯಿಂದ ನಗರದ ಮಲ್ಲಿಕಟ್ಟೆ ವೃತ್ತ ಬಳಿ ಸೋಮವಾರ ಸಂಭ್ರಮಾಚರಣೆ ನಡೆಸಲಾಯಿತು. ಕಾರ್ಯಕರ್ತರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು. ಪ್ರಮುಖರಾದ ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ಗೋಪಾಲ ಕುತ್ತಾರ್, ಭುಜಂಗ ಕುಲಾಲ್, ಆಶಾ ಜಗದೀಶ್ ಭಾಗವಹಿಸಿದ್ದರು.