×
Ad

ಚುನಾವಣಾ ಕರ್ತವ್ಯ: ಮೃತ ಸಿಬ್ಬಂದಿ ಕುಟುಂಬಕ್ಕೆ 15 ಲಕ್ಷ ರೂ. ಪರಿಹಾರ

Update: 2019-08-05 22:37 IST

ಉಡುಪಿ, ಆ.5: 2019ರ ಲೋಕಸಭಾ ಚುನಾವಣಾ ಕರ್ತವ್ಯ ನಿರ್ವ ಹಿಸುವ ಸಂದರ್ಭ ಮೃತಪಟ್ಟ ಆರೋಗ್ಯ ಇಲಾಖೆಯ ಅಂಬುಲೆನ್ಸ್ ಚಾಲಕ ಕೆ.ದಿನೇಶ್ ಗಾಣಿಗ ಕುಟುಂಬಕ್ಕೆ ಚುನಾವಣಾ ಆಯೋಗವು 15ಲಕ್ಷ ರೂ. ಪರಿಹಾರವನ್ನು ಬಿಡುಗಡೆಗೊಳಿಸಿದೆ.

ಈ ಕುರಿತ ಆದೇಶ ಪತ್ರವನ್ನು ಜಿಲ್ಲಾಧಿಕಾರಿ ಹೆಪ್ಸಿಬಾ ರಾಣಿ ಕೊರ್ಲಪಾಟಿ ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮೃತ ದಿನೇಶ್ ಗಾಣಿಗರ ಪತ್ನಿ ಸುಶೀಲಾ ಅವರಿಗೆ ಹಸ್ತಾಂತರಿಸಿದರು.

ಚುನಾವಣೆ ಸಂದರ್ಭದಲ್ಲಿ ಮತಯಂತ್ರಗಳನ್ನು ಇಡಲಾದ ಭದ್ರತಾ ಕೊಠಡಿಯಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮತ್ತು ಅರೆಸೇನಾ ಪಡೆಯ ಸಿಬ್ಬಂದಿಗಳ ತುರ್ತು ಚಿಕಿತ್ಸೆಗಾಗಿ ಕರ್ತವ್ಯ ನಿರ್ವಹಿಸಲು ನಿಯೋಜಿಸಿದ್ದ ಆರೋಗ್ಯ ಇಲಾಖೆಯ ಅಂಬುಲೆನ್ಸ್‌ನ ವಾಹನ ಚಾಲಕ ಕೆ.ದಿನೇಶ್ ಗಾಣಿಗ ಮೇ 2ರಂದು ಕರ್ತವ್ಯ ಮುಗಿಸಿ, ಮನೆಗೆ ಹಿಂದಿರುಗುವಾಗ ಬಾರ್ಕೂರು ಸರಕಾರಿ ಆಸ್ಪತ್ರೆ ಬಳಿ ಬಸ್ಸಿನಲ್ಲಿ ಹೃದಯಾಘಾತವಾಗಿ ಮೃತಪಟ್ಟಿದ್ದರು.

ಚುನಾವಣಾ ಕರ್ತವ್ಯದಲ್ಲಿರುವಾಗ ನಿಧನ ಹೊಂದುವ ಸಿಬ್ಬಂದಿಗಳ ಕುಟುಂಬಕ್ಕೆ ಪರಿಹಾರಧನ ಪಾವತಿಸಲು ಅವಕಾಶವಿದ್ದು, ಜಿಲ್ಲಾಧಿಕಾರಿ ಅವರ ನಿರ್ದೇಶನದಂತೆ ಮೃತ ದಿನೇಶ್ ಗಾಣಿಗ ಕುಟುಂಬದ ವಿವರಗಳನ್ನು, ಆರೋಗ್ಯ ಇಲಾಖೆ ಮತ್ತು ತಹಶೀಲ್ದಾರ್ ಶೀಘ್ರದಲ್ಲಿ ಪಡೆದು ಅಗತ್ಯ ದಾಖಲಾತಿಗಳೊಂದಿಗೆ ರಾಜ್ಯ ಚುನಾವಣಾ ಆಯೋಗಕ್ಕೆ ಸಲ್ಲಿಸಲಾಗಿತ್ತು ಎಂದು ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News