ಅಸ್ಸಾಂನ ಸಾವಿರಾರು ನಾಗರಿಕರಿಗೆ ಎನ್‌ಆರ್‌ಸಿ ನೋಟಿಸ್

Update: 2019-08-05 17:41 GMT

ಮೇಜರ್‌ಟಾಪ್ (ಅಸ್ಸಾಂ), ಆ. 5: ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಯ ಮರು ಪರಿಶೀಲನೆಗೆ ನಿಯೋಜಿತ ಪ್ರಾಧಿಕಾರದ ಮುಂದೆ ಹಾಜರಾಗುವಂತೆ ಅಸ್ಸಾಂನಾದ್ಯಂತದ ಸಾವಿರಾರು ಜನರಿಗೆ ಎನ್‌ಆರ್‌ಸಿ ಕಚೇರಿ ಶನಿವಾರ ವಿಚಾರಣಾ ನೋಟಿಸ್ ಜಾರಿ ಮಾಡಿದೆ.

 ತಮ್ಮ ಜಿಲ್ಲೆಯಿಂದ ಹೊರಗಿರುವವರಿಗೆ ಈ ಹಿಂದೆ 15 ದಿನಗಳ ಕಾಲಾವಕಾಶ ನೀಡಲಾಗಿತ್ತು. ಈಗ ಅದಕ್ಕೆ ಬದಲಾಗಿ ಕೇವಲ 24 ಗಂಟೆ ಕಾಲಾವಕಾಶ ನೀಡಲಾಗಿದೆ ಎಂದು ಅಧಿಕಾರಿಗಳು ಹಾಗೂ ನೋಟಿಸ್ ಸ್ವೀಕರಿಸಿದ ನಾಗರಿಕರು ರವಿವಾರ ತಿಳಿಸಿದ್ದಾರೆ. ಸುಮಾರು 25 ಸಾವಿರ ನೋಟಿಸುಗಳನ್ನು ಜಾರಿ ಮಾಡಲಾಗಿದೆ. ಇದು ವಿಚಾರಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸುವ ಒಂದು ಭಾಗ ಎಂದು ಕಾಮರೂಪ್ ಜಿಲ್ಲೆಯ ಹೆಚ್ಚುವರಿ ಉಪ ಆಯುಕ್ತ ಡೋರ್ತಿ ಸುಯಿಚಾಂಗ್ ಹೇಳಿದ್ದಾರೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ಕಚೇರಿಯ ನಿರ್ದೇಶನದಂತೆ ಈ ನೋಟಿಸನ್ನು ಜಾರಿ ಮಾಡಲಾಗಿದೆ. ಕಚೇರಿಯ ರಾಜ್ಯ ಸಂಯೋಜಕರ ಕಚೇರಿಯಿಂದ ಬಂದ ರೀತಿಯಲ್ಲೇ ನಾವು ನೋಟಿಸುಗಳನ್ನು ಮುದ್ರಿಸಿದ್ದೇವೆ ಎಂದು ಕಾಮರೂಪ್ ಜಿಲ್ಲೆಯ ಚಮರಿಯಾ ಸರ್ಕಲ್ ಅಧಿಕಾರಿ ಅದಿತಿ ಗೊಗೊಯಿ ಹೇಳಿದ್ದಾರೆ.

 ಆಗಸ್ಟ್ 31ರಂದು ಅಂತಿಮ ರಾಷ್ಟ್ರೀಯ ನೋಂದಣಿ ಕರಡನ್ನು ಬಿಡುಗಡೆ ಮಾಡುವ ಒಂದು ತಿಂಗಳು ಮೊದಲು ಮರು ಪರಿಶೀಲನೆ ಪ್ರಕ್ರಿಯೆ ಆರಂಭಿಸುವ ಬಗ್ಗೆ ರಾಜ್ಯ ಎನ್‌ಆರ್‌ಸಿ ಸಂಯೋಜಕ ಪ್ರತೀಕ್ ಹಜೇಲಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News