ಉನ್ನಾವೊ ಸಂತ್ರಸ್ತೆ, ವಕೀಲನನ್ನು ದಿಲ್ಲಿಯ ಎಐಐಎಂಎಸ್‌ಗೆ ವರ್ಗಾಯಿಸಲು ಸುಪ್ರೀಂ ಕೋರ್ಟ್ ಆದೇಶ

Update: 2019-08-05 17:43 GMT

ಲಕ್ನೊ, ಆ. 5: ಕಳೆದ ವಾರ ಸಂಭವಿಸಿದ ಟ್ರಕ್-ಕಾರು ಅಪಘಾತದಲ್ಲಿ ಗಂಭೀರ ಗಾಯಗೊಂಡ ಉನ್ನಾವೊ ಅತ್ಯಾಚಾರ ಸಂತ್ರಸ್ತೆ ಹಾಗೂ ಆಕೆಯ ವಕೀಲರನ್ನು ಲಕ್ನೊದ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಯಿಂದ ದಿಲ್ಲಿಯ ಎಐಐಎಂಎಸ್ ವರ್ಗಾಯಿಸುವಂತೆ ಸುಪ್ರೀಂ ಕೋರ್ಟ್ ಮಂಗಳವಾರ ಸೂಚಿಸಿದೆ.

ಸಂತ್ರಸ್ತೆಯ ಕುಟುಂಬದ ಪರವಾಗಿ ಹಾಜರಾದ ನ್ಯಾಯವಾದಿ ಅತ್ಯಾಚಾರ ಸಂತ್ರಸ್ತೆ ಹಾಗೂ ಅವರ ವಕೀಲರನ್ನು ವರ್ಗಾಯಿಸುವ ಬಗ್ಗೆ ಉಲ್ಲೇಖಿಸಿದ ಬಳಿಕ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡಿದೆ. ಅವರಿಬ್ಬರನ್ನು ವರ್ಗಾಯಿಸುವಾಗ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರ ಅನುಮತಿ ಪಡೆಯುವಂತೆ ಕೂಡ ನ್ಯಾಯಾಲಯ ಹೇಳಿದೆ. ಅತ್ಯಾಚಾರ ಸಂತ್ರಸ್ತೆಯ ಪರವಾಗಿ ಯಾರೊಬ್ಬರೂ ಹಾಜರಾಗದ ಹಿನ್ನೆಲೆಯಲ್ಲಿ ನ್ಯಾಯಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ಪೀಠ ಪ್ರಕರಣದ ವಿಚಾರಣೆಯನ್ನು ಆಗಸ್ಟ್ 9ಕ್ಕೆ ಮುಂದೂಡಿತು.

ಉನ್ನಾವೊ ಅತ್ಯಾಚಾರ ಸಂತ್ರಸ್ತೆಯ ಆರೋಗ್ಯ ಸ್ಥಿತಿ ಸುಧಾರಿಸುತ್ತಿದೆ. ಆದರೆ, ಅವರ ವಕೀಲರು ಇನ್ನು ಕೂಡ ಕೋಮಾದಲ್ಲಿದ್ದಾರೆ ಎಂದು ಪ್ರಸ್ತುತ ಅವರಿಗೆ ಚಿಕಿತ್ಸೆ ನೀಡುತ್ತಿರುವ ಕಿಂಗ್ ಜಾರ್ಜ್ ವೈದ್ಯಕೀಯ ಕಾಲೇಜು ಆಸ್ಪತ್ರೆ ಹೇಳಿದೆ. ‘‘ಬಾಲಕಿಯ ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದಿದೆ. ಆಕೆ ಸಂಜ್ಞೆಗಳನ್ನು ಅನುಸರಿಸಬಲ್ಲಳು ಹಾಗೂ ಕಣ್ಣು ತೆರೆಯುತ್ತಿದ್ದಾಳೆ. ಆಕೆಯ ಜ್ವರ ಕೂಡ ಕಡಿಮೆಯಾಗಿದೆ. ಕೃತಕ ಉಸಿರಾಟ ವ್ಯವಸ್ಥೆ ತೆಗೆಯಲು ಸಿದ್ಧತೆ ನಡೆಯುತ್ತಿದೆ’’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ. ವಕೀಲರು ಕೃತಕ ಉಸಿರಾಟ ವ್ಯವಸ್ಥೆಯ ನೆರವಿಲ್ಲದೆ ಸಮರ್ಪಕವಾಗಿ ಉಸಿರಾಡುತ್ತಿದ್ದಾರೆ. ಆದರೆ, ಅವರ ಆರೋಗ್ಯ ಪರಿಸ್ಥಿತಿಯಲ್ಲಿ ಯಾವುದೇ ಸುಧಾರಣೆ ಆಗಿಲ್ಲ. ಅವರು ಇನ್ನು ಕೂಡಾ ಕೋಮಾದಲ್ಲಿ ಇದ್ದಾರೆ ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News